ಕೊಲ್ಲೂರು: ಕಳೆದ ಹಲವು ವರ್ಷಗಳಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ ನೆರೆಯ ಕೇರಳ ಹಾಗೂ ತಮಿಳುನಾಡು ಸೇರಿದಂತೆ ದೇಶದ ನಾನಾ ಕಡೆಯಿಂದ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಕೊಲ್ಲೂರು ದಕ್ಷಿಣ ಭಾರತದಲ್ಲೇ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಕೊಲ್ಲೂರು ಇಲ್ಲಿಗೆ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತರು ಇಲ್ಲಿ ತುಂಬಿ ಹರಿಯುತ್ತಿರುವ ಸೌಪರ್ಣಿಕಾ ಸೇರಿದಂತೆ ಉಳಿದ ಪುಣ್ಯ ತೀರ್ಥಗಳಲ್ಲಿ ಸ್ನಾನ ಮಾಡುವುದು ಸಂಪ್ರದಾಯ.
ಆದರೆ ಒಳಚರಂಡಿ ಯೋಜನೆಯ ಅಸಮರ್ಪಕ ಕಾಮಗಾರಿಯಿಂದ ಸೌಪರ್ಣಿಕಾ ನದಿ ಕೊಳಚೆ ಯಾಗಿ ಪರಿವರ್ತನೆಯಾಗಿದೆ. ದೇವಸ್ಥಾನದ ಮುಂಭಾಗದಲ್ಲಿ ಹರಿಯುವ ಅಗ್ನಿ ತೀರ್ಥ ಹಾಗೂ ಕಾಶಿ ತೀರ್ಥ ಭಕ್ತರ ಪುಣ್ಯ ತೀರ್ಥಗಳಾಗಿವೆ. ಸೌಪರ್ಣಿಕಾ ಸ್ನಾನ ಘಟ್ಟವನ್ನು ಬಿಟ್ಟರೆ ಪುಣ್ಯ ಸ್ನಾನಕ್ಕಾಗಿ ಭಕ್ತರು ಹೆಚ್ಚು ಬರುವುದು ಕಾಶಿ ತೀರ್ಥಕ್ಕೆ. ಇಲ್ಲಿ ಪುಣ್ಯ ಸ್ನಾನದ ಹರಕೆ ತೀರಿಸುವ ವಾಡಿಕೆ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ತೀರ್ಥ ಕ್ಷೇತ್ರದಲ್ಲಿರುವ ಸ್ಥಳೀಯ ಲಾಡ್ಜ್ ಮತ್ತು ಹಾಸ್ಟೆಲ್ ಗಳ ನೀರನ್ನು ನೇರವಾಗಿ ನದಿಗೆ ಬಿಡುವುದರಿಂದ, ಕೊಳಚೆ ನೀರು ಸೇರುವ ಪುಣ್ಯ ತೀರ್ಥಗಳಲ್ಲಿ ಭಕ್ತರು ಸ್ನಾನ ಮಾಡ ಬೇಕಾದ ಪರಿಸ್ಥಿತಿ ಎದುರಾಗಿದೆ.
ಕೊಲ್ಲೂರಿನಲ್ಲಿ ಒಳಚರಂಡಿ ಯೋಜನೆಯ ಕೊಳಚೆ ನೀರಿನಿಂದ ಕಾಶಿ ತೀರ್ಥ ಮತ್ತು ಸೌಪರ್ಣಿಕಾ ನದಿ ಮಲಿನವಾಗುತ್ತಿದೆ. ಒಳಚರಂಡಿ ಕಾಮಗಾರಿಯ ಅವ್ಯವಸ್ಥೆ ಒಂದು ಕಡೆಯಾದ್ರೆ,ಮತ್ತೊಂದು ಕಡೆಯಿಂದ ದೇವಾಲಯ ಸುತ್ತಮುತ್ತಲಿನ ಕಸ ಕಡ್ಡಿ ಪ್ಲಾಸ್ಟಿಕ್ ಬಾಟೆಲ್ ಸೌಪರ್ಣಿಕಾ ನದಿಯನ್ನು ಸೇರುತ್ತಿದ್ದು ನದಿ ಚರಂಡಿಯಾಗಿ ಮಾರ್ಪಾಡಾಗುತ್ತಿದೆ. ದೇವಾಲಯ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಯ ಜೊತೆಗೆ ಒಳಚರಂಡಿ ವ್ಯವಸ್ಥೆ ಸರಿಪಡಿಸುವ ಕಡೆಗೂ ಗಮನ ಹರಿಸಬೇಕಿದೆ.
ಒಟ್ಟಾರೆ ಕೊಲ್ಲೂರಿನ ಪುಣ್ಯ ನದಿಗಳು ಕಲುಷಿತಗೊಳ್ಳುತ್ತಿರುವುದರಿಂದ ಭಕ್ತರ ಭಾವನೆಗಳಿಗೆ ಘಾಸಿಯಾಗುತ್ತಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುವ ಕ್ಷೇತ್ರದ ಈ ಸಮಸ್ಯೆಗೆ ಮುಕ್ತಿ ಸಿಗಬೇಕಿದೆ.
Kshetra Samachara
24/12/2024 01:14 pm