ಕಾರವಾರ: ನಗರದ ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನಿಂಗ್ ಮಾಡಿಸಲು ಎಬಿಎಆರ್‌ಕೆ ಅನುಮತಿ ಪಡೆಯಬೇಕು ಎನ್ನುವ ಆದೇಶವು ರೋಗಿಗಳಿಗೆ ಮಾರಕವಾಗಿದ್ದು ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರು ಸೋಮವಾರ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರಿಗೆ ಮನವಿ ನೀಡಿದರು.
ಅಂಕೋಲಾ ತಾಲೂಕು ಆಸ್ಪತ್ರೆಯಿಂದ ವಿಶ್ವನಾಥ ಗಾಂವಕರ ಎನ್ನುವ ವ್ಯಕ್ತಿಯನ್ನು ಸಿಟಿ ಸ್ಕ್ಯಾನ್ ಮಾಡಿಸಲು ರೆಫರ್ ಮಾಡಲಾಗಿತ್ತು. ಆತನನ್ನು ಡಿ.21 ರಂದು ಬೆಳಗ್ಗೆ 11.30ಕ್ಕೆ ಇಲ್ಲಿನ ವೈದ್ಯಕೀಯ ವಿಜ್ಞಾನ ಕಾಲೇಜಿನ ತುರ್ತು ಚಿಕಿತ್ಸಾ ವಿಭಾಗದಲ್ಲಿ ವೈದ್ಯರಿಗೆ ತೋರಿಸಲಾಗಿದೆ. ಆದರೆ ಸಿಟಿ ಸ್ಕ್ಯಾನ್ ಮಾಡಲು ಸಂಬಂಧಪಟ್ಟವರು ಎಬಿಆರ್ಕೆಯಿಂದ ಪರವಾನಿಗೆ ತರಬೇಕು ಎಂದು ನಿರಾಕರಿಸಿದ್ದಾರೆ. ಸಂಜೆ 3.30 ಗಂಟೆಯಾದರೂ ಸಿಟಿ ಸ್ಕ್ಯಾನ್ ಮಾಡಿಲ್ಲ. ಬಳಿಕ ತಕರಾರು ಮಾಡಿದಾಗ ಸ್ಕ್ಯಾನಿಂಗ್ ಮಾಡಿದ್ದು ರೋಗಿಯ ಮೆದುಳಿನಲ್ಲಿ ರಕ್ತಸ್ರಾವ ಆಗಿರುವುದು ಪತ್ತೆಯಾಗಿದೆ.
ಈರೀತಿ ಪರವಾನಿಗೆಗಾಗಿ ತಡ ಮಾಡಿದರೆ ರೋಗಿಯು ಮೃತರಾಗುತ್ತಾರೆ. ಹೀಗಾಗಿ 10 ದಿನಗಳ ಒಳಗಾಗಿ ಆದೇಶವನ್ನು ಹಿಂಪಡೆಯಬೇಕು. ಹಿಂಪಡೆಯದೇ ಇದ್ದಲ್ಲಿ ಜ. 9 ರಂದು ಕ್ರಿಮ್ಸ್ ಎದುರು ಸಾಂಕೇತಿಕವಾಗಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
Kshetra Samachara
23/12/2024 09:09 pm