ಯಲ್ಲಾಪುರ: ಯಲ್ಲಾಪುರ ತಾಲೂಕಾ ಅರನೇ ಕನ್ನಡ ಸಾಹಿತ್ಯ ಸಮ್ಮೇಳನವು ತಾಲೂಕಿನ ಮಂಚಿಕೇರಿಯ ರಾಜರಾಜೇಶ್ವರಿ ರಂಗಮಂದಿರದಲ್ಲಿ ರಾಮಕೃಷ್ಣ ಭಟ್ ದುಂಡಿ ಅವರ ಸರ್ವಾಧ್ಯಕ್ಷತೆಯಲ್ಲಿ ಸೋಮವಾರ ನಡೆಯಲಿದೆ.
ಸಮ್ಮೇಳನದ ಸಿದ್ಧತೆಗಳು ಪೂರ್ಣಗೊಂಡಿದ್ದು, ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಕನ್ನಡ ನುಡಿ ಹಬ್ಬದಲ್ಲಿ ಭಾಗವಹಿಸಲು ವಿವಿಧ ಭಾಗಗಳಿಂದ ಕನ್ನಡ ಅಭಿಮಾನಿಗಳು ಮಂಚಿಕೆರಿಗೆ ಆಗಮಿಸಲಿದ್ದು, ಈ ಸಮ್ಮೇಳನವನ್ನು ಯಶಸ್ವಿಗೊಳಿಸಲು ಸಂಘಟಕರು ನಿರಂತರವಾಗಿ ಶ್ರಮವಹಿಸಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಉದ್ಘಾಟನೆ, ಸಭಾ ಕಾರ್ಯಕ್ರಮ, ಕವಿಗೋಷ್ಠಿ, ಸಂವಾದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೂ ಸೇರಿದಂತೆ ಎಲ್ಲ ಕಾರ್ಯಕ್ರಮಗಳನ್ನೂ ಅಚ್ಚುಕಟ್ಟಾಗಿ ನಡೆಸಲು ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ.
ಸಮ್ಮೇಳನ ನಡೆಯಲಿರುವ ವೇದಿಕೆಯನ್ನು ಆಕರ್ಷಕವಾಗಿ ಸಿದ್ಧಗೊಳಿಸಲಾಗಿದೆ. ವೇದಿಕೆಯ ಹಿನ್ನೆಲೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳ ಭಾವಚಿತ್ರಗಳು, ಸರ್ವಾಧ್ಯಕ್ಷರ ಭಾವಚಿತ್ರ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಮುಖರ ಭಾವಚಿತ್ರಗಳು ರಾರಾಜಿಸುತ್ತಿವೆ. ಸಭಾಮಂಟಪ, ವಿವಿಧ ದ್ವಾರಗಳು, ಸಭಿಕರಿಗೆ ಆಸನದ ವ್ಯವಸ್ಥೆ ಪೂರ್ಣಗೊಂಡಿದೆ. ಕನ್ನಡ ಮನಸ್ಸುಗಳಿಗೆ ಸ್ವಾಗತ ಕೋರುವ ಬ್ಯಾನರ್ ಗಳನ್ನು ಅಳವಡಿಸಲಾಗಿದೆ. ಉತ್ತಮ ಧ್ವನಿ,ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನಕ್ಕೆ ಆಗಮಿಸುವ ಎಲ್ಲರಿಗೂ ರುಚಿಕರವಾದ ಊಟೋಪಚಾರ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದಕ್ಕಾಗಿ ಎಲ್ಲ ಸಿದ್ಧತೆಗಳೂ ಭರದಿಂದ ನಡೆದಿವೆ.
Kshetra Samachara
22/12/2024 04:29 pm