ನಂಜನಗೂಡು: ಮಹಿಳಾ ಪ್ರಯಾಣಿಕರೊಂದಿಗೆ ಕೆಎಸ್ ಆರ್ ಟಿಸಿ ಬಸ್ ನಿರ್ವಾಹಕ ದುರ್ವರ್ತನೆ ತೋರಿದ್ದು, ಈ ಕಂಡಕ್ಟರ್ ವಿರುದ್ಧ ಡಿಪೋ ಮ್ಯಾನೇಜರ್ ಗೆ ದೂರು ನೀಡಿದ್ದಾರೆ.
ನಂಜನಗೂಡಿನಿಂದ ಚಿಕ್ಕಬರಗಿ ಗ್ರಾಮಕ್ಕೆ ತೆರಳುವ ಬಸ್ ಸಂಖ್ಯೆ KA59 F 0879 ನ ಚಾಲಕ ಹಾಗೂ ನಿರ್ವಾಹಕ ಮಂಜುನಾಥ್ ವಿರುದ್ಧ ದೂರು ನೀಡಲಾಗಿದೆ. ಮಹಿಳೆಯೊಬ್ಬರೊಂದಿಗೆ ಮಾತನಾಡುವಾಗ ಅಶ್ಲೀಲ ಪದ ಬಳಸಿ ಆಕೆಯ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ್ದಾರೆಂದು ಆರೋಪಿಸಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಡಿ.20ರಂದು ಸರ್ಕಾರಿ ಬಸ್ ಹೆಡಿಯಾಲ ಗ್ರಾಮಕ್ಕೆ ತೆರಳಲು ಸರ್ಕಾರಿ ಶಾಲೆ ಮುಂಭಾಗ ಸಾಗಿದೆ. ಬಸ್ ಗಾಗಿ ಕಾದಿದ್ದ ಮಹಿಳಾ ಪ್ರಯಾಣಿಕರೊಬ್ಬರು ನಿಲ್ಲಿಸುವಂತೆ ಕೈ ತೋರಿಸಿದ್ದಾರೆ. ಚಾಲಕ ಸ್ವಲ್ಪದೂರ ಸಾಗಿ ಬಸ್ ನಿಲ್ಲಿಸಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ ಮಹಿಳೆ ಎಂದು ಪರಿಗಣಿಸದೆ ಅಶ್ಲೀಲ ಪದ ಬಳಕೆ ಮಾಡಿರುವುದಲ್ಲದೆ, ಫ್ರೀಯಾಗಿ ಬಸ್ ಬಿಟ್ಟಿದ್ದಾರೆ ಎಂದು ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಬಗ್ಗೆಯೂ ಹಗುರವಾಗಿ ಮಾತನಾಡಿ ಮಹಿಳೆಯನ್ನು ನಿಂದಿಸಿದ್ದಾನೆ.
ನಂತರ ಮಹಿಳಾ ಪ್ರಯಾಣಿಕರ ಫೋಟೋ ಮತ್ತು ವಿಡಿಯೋಗಳನ್ನ ತನ್ನ ಮೊಬೈಲ್ ನಲ್ಲಿ ನಿರ್ವಾಹಕ ಚಿತ್ರೀಕರಿಸಿದ್ದಾನೆ. ವಿಚಾರ ತಿಳಿದ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಅಧ್ಯಕ್ಷ ಮಂಜು ಶಂಕರಪುರ ನೇತೃತ್ವದಲ್ಲಿ ಸಂಘಟಕರು ನಂಜನಗೂಡು ಘಟಕದ ಡಿಪೋ ಮ್ಯಾನೇಜರ್ ಗೆ ದೂರು ನೀಡಿದ್ದಾರೆ. ಸಾರಿಗೆ ಬಸ್ ನಿರ್ವಾಹಕ ಮಂಜುನಾಥ್ ಗೆ ಚಾಲಕನು ಕೂಡ ಸಹಕರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಇಬ್ಬರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಬಸ್ ನಿರ್ವಾಹಕನನ್ನು ಸಂಘಟಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಡಿಪೋ ಮ್ಯಾನೇಜರ್, ಮಂಜುನಾಥ್ ನ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಪರಿಶೀಲನೆ ನಂತರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
PublicNext
21/12/2024 05:24 pm