ಹಾಸನ: ಸಂವಿಧಾನಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಜೈ ಭೀಮ್ ಬ್ರಿಗೇಡ್ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿದರು.
ಈ ವೇಳೆ ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಕುಮಾರ್ ಮಾತನಾಡಿ, ಸಂವಿಧಾನದ ಅಡಿಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಈ ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ. ಅವರು ತಮ್ಮ ನಾಲಿಗೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಇಲ್ಲವಾದರೆ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಅವರ ವಿರುದ್ಧ ಉಗ್ರ ಹೋರಾಟ ಮಾಡಲಿವೆ ಎಂದು ಎಚ್ಚರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅಮಿತ್ ಶಾ ಅವರನ್ನು ತಮ್ಮ ಸಚಿವ ಸಂಪುಟದಿಂದ ಕೈ ಬಿಡಬೇಕು ಅಲ್ಲದೆ ಅವರಿಗೆ ಅಂಬೇಡ್ಕರ್ ಅವರ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ ಅವರು ಶಾ ಹೇಳಿಕೆ ದಲಿತರ ಹಾಗೂ ಸಂವಿಧಾನ ಬಗ್ಗೆ ಅವರು ಹೊಂದಿರುವ ಕೆಟ್ಟ ನಿಲುವನ್ನು ತೋರಿಸುತ್ತದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಹಾಗೂ ರಾಷ್ಟ್ರಮಟ್ಟಗಳಲ್ಲಿ ವಿವಾದಗಳಾದಾಗ ಸಂವಿಧಾನದ ಅಡಿಯಲ್ಲಿ ತೀರ್ಮಾನ ಹಾಗೂ ಬಗೆಹರಿಸಲು, ಕ್ರಮ ಕೈಗೊಳ್ಳಲು ನಿಯಮಗಳಿವೆ. ಅದರ ಬಗ್ಗೆ ಕನಿಷ್ಠ ಪ್ರಜ್ಞೆಯು ಇಲ್ಲದೆ ಇರುವ ಗೃಹ ಸಚಿವ ಅಮಿತ್ ಶಾ ಸಂವಿಧಾನ ಬರೆದ ಅಂಬೇಡ್ಕರ್ ಅವರ ಬಗ್ಗೆಯೇ ಅವಹೇಳನಕಾರಿ ಮಾತುಗಳನ್ನಾಡಿರುವುದು ಶಾ ಅವರ ನೀಚ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ಮೊದಲಿನಿಂದಲೂ ದಲಿತರ, ಬಡವರ, ಕೂಲಿ ಕಾರ್ಮಿಕರ ವಿರುದ್ಧವಾಗಿ ಆಡಳಿತ ಮಾಡಿಕೊಂಡು ಬಂದಿದೆ. ಈ ಹಿಂದೆಯಿಂದಲೂ ಸಂವಿಧಾನ ಬದಲಾಯಿಸಲು ತಂತ್ರಗಾರಿಕೆ ಮಾಡುತ್ತಿರುವ ಬಿಜೆಪಿ ತನ್ನ ಬುದ್ಧಿಯನ್ನು ತೋರಿಸುತ್ತಲೇ ಬಂದಿದೆ, ಅಮಿತ್ ಶಾ ಹೇಳಿಕೆ ಸಂವಿಧಾನ ಹಾಗೂ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಬಿಜೆಪಿ ಹೊಂದಿರುವ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಈ ರೀತಿಯ ಹೇಳಿಕೆಗಳನ್ನು ನಿಲ್ಲಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜನರ ಮನಸ್ಸಿನಲ್ಲಿ ವೈಜ್ಞಾನಿಕ ಮನೋಭಾವನೆ ಬಿತ್ತುವ ಬದಲು ಮೌಡ್ಯ ಭಾವನೆ ಬಿತ್ತಲು ಮುಂದಾಗಿರುವ ಬಿಜೆಪಿ ಜನರ ಮನಸ್ಸಿನಲ್ಲಿ ಕೋಮು ಭಾವನೆ ಸೃಷ್ಟಿಸಿ ಜನರ ನಡುವೆ ಕಂದಕ ಸೃಷ್ಟಿಸುವ ಕೆಲಸ ಮಾಡುತ್ತಿದೆ ಕೂಡಲೇ ಇಂತಹ ಹೇಳಿಕೆಗಳನ್ನು ನಿಲ್ಲಿಸಬೇಕು ಇಲ್ಲವಾದರೆ ಈಗಾಗಲೇ ಹಂತ ಹಂತವಾಗಿ ನಶಿಸಿ ಹೋಗುತ್ತಿರುವ ಬಿಜೆಪಿ ಮುಂದಿನ ದಿನಗಳಲ್ಲಿ ಸಂಪೂರ್ಣ ರಾಷ್ಟ್ರ ಮಟ್ಟದಲ್ಲಿಯೂ ಅಧಿಕಾರ ಕಳೆದುಕೊಂಡು ಮೂಲೆ ಗುಂಪಾಗಲಿದೆ ಎಂದರು.
ಪ್ರತಿಭಟನೆಯಲ್ಲಿ ಜೈ ಭೀಮ್ ಬ್ರಿಗೇಡ್ ಸಂಘಟನೆ ಅಧ್ಯಕ್ಷ ರಾಜೇಶ್, ಕಾರ್ಯಾಧ್ಯಕ್ಷ ಚಂದ್ರಶೇಖರ್, ತಾಲೂಕು ಅಧ್ಯಕ್ಷರಾದ ಶಂಕರ್, ಮಾನವ ಬಂಧುತ್ವ ವೇದಿಕೆಯ ರಂಗಸ್ವಾಮಿ, ಅರುಣ್ ಕುಮಾರ್, ಪ್ರಕೃತಿ ಸಮುದಾಯ ಸಂಸ್ಥೆಯ ಅಧ್ಯಕ್ಷರಾದ ವರ್ಷ, ಚಂದ್ರು, ಸುಬ್ರಹ್ಮಣ್ಯ, ನಯಾಜ್ ಅಹಮ್ಮದ್, ಫಯಾಜ್, ಇರ್ಫಾನ್, ಪ್ರಸಾದ್ ಇತರರು ಇದ್ದರು.
Kshetra Samachara
21/12/2024 01:22 pm