ಬೆಳಗಾವಿ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿದ ಆರೋಪದ ಮೇರೆಗೆ ವಶಕ್ಕೆ ಪಡೆದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಗುರುವಾರ ತಡರಾತ್ರಿಯೇ ಬೆಂಗಳೂರಿಗೆ ಕರೆದೊಯ್ಯಲಾಯಿತು.
ತಡರಾತ್ರಿ ಠಾಣೆಯಿಂದ ಅವರನ್ನು ಪೊಲೀಸರು ಹೊತ್ತು ತಂದರು. ಅವರ ತಲೆಗೆ ಪೆಟ್ಟಾಗಿ, ರಕ್ತ ಸೋರಿದ ಗಾಯಗಳು ಕಂಡವು. ಆದರೆ, ಅವರಿಗೆ ಯಾವ ರೀತಿಯ ಪೆಟ್ಟು ಬಿದ್ದಿದೆ ಎಂಬುದು ಗೊತ್ತಾಗಿಲ್ಲ.
ರವಿ ಅವರು ಬೆಂಗಳೂರಿಗೆ ಹೊರಡಲು ಸಿದ್ಧರಿಲ್ಲದ ಕಾರಣ ಪೊಲೀಸರು ಹೆಗಲ ಮೇಲೆ ಹೊತ್ತುಕೊಂಡು ಬಂದರು. ಪೊಲೀಸ್ ಜೀಪಿನ ಕಿಟಕಿಯಿಂದಲೇ ಅವರ ದೇಹವನ್ನು ವಾಹನದೊಳಗೆ ತೂರಿಸಿದರು.
ಸಿ.ಟಿ. ರವಿ ಅವರನ್ನು ಹೊತ್ತ ವಾಹನ ಬೆಂಗಳೂರಿನತ್ತ ಸಾಗಿದ ಬಳಿಕ ಆರ್.ಅಶೋಕ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ‘ರವಿ ಅವರನ್ನು ಕೊಲೆ ಮಾಡಲು ಯತ್ನಿಸಲಾಗಿದೆ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ. ಬದಲಾಗಿ, ಠಾಣೆಯಲ್ಲೇ ಅವರನ್ನು ಹೊಡೆದು ತಲೆ ಒಡೆದಿದ್ದಾರೆ’ ಎಂದು ಕಿಡಿ ಕಾರಿದರು.
‘ಈ ಕೃತ್ಯ ಖಂಡಿಸಿ ಶುಕ್ರವಾರ ಚಿಕ್ಕಮಂಗಳೂರು ಬಂದ್ ಕರೆ ನೀಡಲಾಗಿದೆ. ಡಿ.26ರಂದು ಬೆಳಗಾವಿ ಬಂದ್ ಮಾಡಲಾಗುವುದು. ರಾಜ್ಯದಾದ್ಯಂತ ದೊಡ್ಡ ಹೋರಾಟ ನಡೆಯಲಿದೆ’ ಎಂದೂ ಹೇಳಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಸದನದಲ್ಲೇ ನನಗೆ ‘ಕೊಲೆಗಡುಕ’ ಎಂದು ನಿಂದನೆ ಮಾಡಿದ್ದಾರೆ. ಅವರ ಬೆಂಬಲಿಗರನ್ನು ಸುವರ್ಣ ಸೌಧಕ್ಕೆ ನುಗ್ಗಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ’ ಎಂದು ಆರೋಪಿಸಿ, ಸಿ.ಟಿ. ರವಿ ಕೂಡ ಪ್ರತಿ ದೂರು ನೀಡಿದರು. ಆದರೆ ಪೊಲೀಸರು ಎಫ್‌ಐಆರ್ ಮಾಡಿಕೊಳ್ಳುವ ಮುನ್ನವೇ ರವಿ ಅವರನ್ನು ಬೆಂಗಳೂರಿಗೆ ಸಾಗಿಸಲು ಮುಂದಾದರು.
ಆಗ ಠಾಣೆಗೆ ಬಂದ ವಿಪಕ್ಷ ನಾಯಕ ಆರ್.ಅಶೋಕ್, ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಸುನೀಲಕುಮಾರ ಮುಂತಾದವರು ತೀವ್ರ ಪ್ರತಿಭಟನೆ ನಡೆಸಿದರು. ಲಕ್ಷ್ಮಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸದ ಹೊರತು ರವಿ ಅವರನ್ನು ಕರೆದೊಯ್ಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
PublicNext
20/12/2024 07:32 am