ಕುಂದಾಪುರ: ಕುಂದಾಪುರ- ತಾಲೂಕಿನ ಹೊಂಬಾಡಿ-ಮಂಡಾಡಿ, ಹಾಗೂ ಹಳ್ಳಾಡಿ-ಹರ್ಕಾಡಿ ಗ್ರಾಮ ವ್ಯಾಪ್ತಿಯ ವಿವಿಧೆಡೆಗಳಲ್ಲಿ ಮೂರ್ನಾಲ್ಕು ದಿನಗಳಿಂದ ಚಿರತೆ ಪ್ರತ್ಯಕ್ಷವಾಗುತ್ತಿದ್ದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಯಡಾಡಿ- ಮತ್ಯಾಡಿ ಗ್ರಾಮದ ಕರಿನಕಟ್ಟೆ ರಾಮದಾಸ ಭಂಡಾರಿ ಎಂಬುವವರ ಮನೆಯ ಮುಖ್ಯದ್ವಾರದವರೆಗೂ ಮಧ್ಯರಾತ್ರಿ ವೇಳೆಗೆ ಚಿರತೆ ಆಗಮಿಸಿತ್ತು. ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಬುಧವಾರ ಮುಂಜಾನೆ ವೇಳೆಯೂ ಕೂಡ ಇಲ್ಲಿಗೆ ಸಮೀಪದ ಹಳ್ಳಾಡಿ-ಹರ್ಕಾಡಿ ಗರಿಕೆಮಠ, ಸಿರಿಮಠ ಎಂಬಲ್ಲಿ ಚಿರತೆ ಓಡಾಡಿದ ಬಗ್ಗೆ ವರದಿಯಾಗಿದೆ. ಕುರುಚಲು ಕಾಡು ಪ್ರದೇಶವಾಗಿರುವ ಈ ಭಾಗದಲ್ಲಿ ನಿರಂತರವಾಗಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಚಿರತೆ ಆಹಾರವನ್ನರಿಸಿ ಮನೆಬಾಗಿಲಿಗೂ ಬರುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆ ಚಿರತೆಯನ್ನು ಹಿಡಿಯಲು ಬೋನು ಅಳವಡಿಸಿದ್ದರೂ ಸ್ಥಳೀಯರ ಭಯ ದೂರವಾಗಿಲ್ಲ. ಈ ಪ್ರದೇಶದಲ್ಲಿ ಚಿರತೆ ಬೀಡುಬಿಟ್ಟಿದ್ದು ಗ್ರಾಮಸ್ಥರು ಸಹಜವಾಗಿಯೇ ಭಯಭೀತರಾಗಿದ್ದಾರೆ. ಮಕ್ಕಳು ಶಾಲೆ ಕಾಲೇಜಿಗೆ ಹೋಗಿ ಬರಲೂ ಭಯಪಡುತ್ತಿದ್ದಾರೆ.
Kshetra Samachara
19/12/2024 03:11 pm