ಕೊಡಗು: ಕೊಡಗಿನ ಪ್ರತಿಯೊಂದು ಆಚರಣೆಯೂ ಸ್ಪೆಷಲ್..ವೀರ ಶೂರರ ನಾಡೆಂದು ಕರೆಸಿಕೊಳ್ಳೋ ಇಲ್ಲಿನ ಜನರ ಪ್ರತಿಯೊಂದು ಹಬ್ಬಕ್ಕೂ ಪ್ರಕೃತಿಗೂ ಸಂಬಂಧ ಇದ್ದೇ ಇರುತ್ತೆ. ಇಂಡಿಯನ್ ಆರ್ಮ್ಸ್ ಆಕ್ಟ್ ಸೆಕ್ಷನ್ ಮೂರರ ಪ್ರಕಾರ ಇಲ್ಲಿನ ಜನರಿಗೆ ಕೋವಿ ಬಳಸಲು ವಿನಾಯಿತಿ ಕೂಡ ಇದೆ. ಕೊಡಗಿನ ಜನರ ಹಬ್ಬ ಹರಿದಿನ, ಹುಟ್ಟು ಸಾವು ಎಲ್ಲದರಲ್ಲಿಯೂ ಕೋವಿಗೆ ವಿಶೇಷ ಸ್ಥಾನವಿದೆ.
ಕಳೆದ ಹಲವು ವರ್ಷದಿಂದ ಕೊಡವ ನ್ಯಾಷನಲ್ ಕೌನ್ಸಿಲ್ (CNC) ಸಂಘಟನೆ ಕೊಡಗಿನಲ್ಲಿ ಕೋವಿ ಹಬ್ಬವನ್ನ ಆಚರಿಸಿಕೊಂಡು ಬರುತ್ತಿದೆ. ಕೋವಿ ಹಬ್ಬವನ್ನು ಶುರುಮಾಡಲು ಕೂಡ ಒಂದು ಮಹತ್ವದ ಹಿನ್ನೆಲೆಯಿದೆ. ದೇಶದಲ್ಲಿ ಯಾರಿಗೂ ಇಲ್ಲದ ವಿಶೇಷ ವಿನಾಯಿತಿ ಕೊಡಗಿನ ಜನ್ರಿಗೆ ಕೋವಿ ಬಳಸಲು ಇದೆ. ಇದು ಶತಮಾನಗಳಿಂದಲೂ ನಡೆದುಕೊಂಡು ಬಂದ ಪದ್ಧತಿ. ಇದೇ ಕಾರಣಕ್ಕೆ ಕೋವಿ ಕೊಡವರ ಪಾಲಿಗೆ ಕೇವಲ ಆಯುಧವಲ್ಲ, ಅದೊಂದು ಧಾರ್ಮಿಕ ಸಂಕೇತ. ಹಾಗಾಗಿ ಈಗಿನ ಯುವ ಪೀಳಿಗೆಗೆ ಕೋವಿಗೂ ಕೊಡಗಿನ ಜನರಿಗೂ ಇರೋ ಅವಿನಾಭಾವ ಸಂಬಂಧದ ಪರಂಪರೆಯನ್ನು ತಿಳಿಸಲು ಈ ಕೋವಿ ಉತ್ಸವ ಮಹತ್ವ ಪಡೆದಿದೆ.
ಈ ಬಾರಿ ಕೋವಿ ಹಬ್ಬವನ್ನ ಕೊಡಗು ಜಿಲ್ಲೆ ಮೂರ್ನಾಡು ಸಮೀಪದ ಖಾಸಗಿ ರೆಸಾರ್ಟ್ ನಲ್ಲಿ ನಡೆಸಲಾಯಿತು. ಸಾಂಪ್ರದಾಯಿಕ ಉಡುಪಿನಲ್ಲಿ ಭಕ್ತಿಪೂರ್ವಕವಾಗಿ ಮೆರವಣಿಗೆ ಮಾಡಿ ಕೋವಿಯನ್ನು ತಂದು ಪೂಜಿಸಲಾಯ್ತು. ನಂತರ ಪುರುಷ ಮಹಿಳೆ ಎಂಬ ಭೇದವಿಲ್ಲದೆ, ಎಲ್ಲರೂ ತೆಂಗಿನಕಾಯಿಗೆ ಗುಂಡು ಹಾರಿಸೋ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ರು. ಬಂದೂಕು ಸಮೇತ ಮೆರವಣಿಗೆ ನಡೆಸಿದ ಸಾಂಪ್ರದಾಯಿಕ ಉಡುಗೆತೊಟ್ಟ ಜನರು ಮೈದಾನದಲ್ಲಿ ಜಮಾಯಿಸಿ ಬಂದೂಕು ತಮ್ಮ ಹಕ್ಕು ಎಂಬುದನ್ನ ಸಾರಿದ್ರು.ಇದಾದ ಬಳಿಕ ಉತ್ಸವದಲ್ಲಿ ಪಾಲ್ಗೊಂಡಿದ್ದವರು ತಮ್ಮ ತಮ್ಮ ಕೋವಿಗಳೊಂದಿಗೆ ಕೊಡಗಿನ ಸಾಂಪ್ರದಾಯಿಕ ವಾಲಗಕ್ಕೆ ಹೆಜ್ಜೆ ಹಾಕಿದರು. ಈ ವಿಶಿಷ್ಟ ಆಚರಣೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.
Kshetra Samachara
19/12/2024 12:55 pm