ಮಂಗಳೂರು: ಕೊರೊನಾ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲಾಡಳಿತದಿಂದ ಮಂಗಳೂರಿನಲ್ಲಿ ಕರಾವಳಿ ಉತ್ಸವ ಯೋಜನೆಗೊಳ್ಳಲಿದೆ.
ಡಿಸಿ ಮುಲ್ಲೈ ಮುಗಿಲನ್ ಮಾತನಾಡಿ, 2019-20ರಲ್ಲಿ ಕರಾವಳಿ ಉತ್ಸವ ಮಂಗಳೂರಿನಲ್ಲಿ ನಡೆದಿತ್ತು. ಆ ಬಳಿಕ ಡಿಸೆಂಬರ್ 21ರಿಂದ ಜನವರಿ 19ರವರೆಗೆ ಮತ್ತೊಮ್ಮೆ 'ಕರಾವಳಿ ಉತ್ಸವ' ನಮ್ಮ ತುಳುನಾಡಿನ ರಾಜಧಾನಿಯಲ್ಲಿ ನಡೆಯಲಿದೆ.
ಕರ್ನಾಟಕ, ತುಳು, ಬ್ಯಾರಿ, ಕೊಂಕಣಿ, ಅರೆ ಭಾಷೆ ಅಕಾಡೆಮಿಗಳ ಸಹಕಾರದೊಂದಿಗೆ ನಡೆಯಲಿರುವ ಉತ್ಸವದಲ್ಲಿ ಕರಾವಳಿಯ ವೈವಿಧ್ಯತೆಗಳು ಸಾರ್ವಜನಿಕರನ್ನು ರಂಜಿಸಲಿವೆ.
ಕರಾವಳಿಯ ನೈಜ ಸಂಸ್ಕೃತಿಯ ಅನಾವರಣ, ಸಂಪ್ರದಾಯಗಳ ಪ್ರದರ್ಶನ, ಆಹಾರ ಖಾದ್ಯಗಳ ಪರಿಚಯ, ವಿವಿಧ ವಿನೋದಾವಳಿಗಳು ಒಂದೇ ಜಾಗದಲ್ಲಿ ತುಳುನಾಡಿನ ಜನತೆಗೆ ಲಭ್ಯವಾಗಲಿವೆ ಎಂದು ತಿಳಿಸಿದ್ದಾರೆ.
ಡಿ.21ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಆ ದಿನ ಸಂಜೆ 4ಕ್ಕೆ ಕೊಡಿಯಾಲ್‌ಬೈಲ್‌ನ ಕೆನರಾ ಕಾಲೇಜಿನಿಂದ ಕರಾವಳಿ ಉತ್ಸವ ಮೈದಾನದವರೆಗೆ ಆಕರ್ಷಕ ಮೆರವಣಿಗೆ ನಡೆಯಲಿದೆ. ಜಿಲ್ಲೆಯ ಸಂಸ್ಕೃತಿ ಮತ್ತು ವೈವಿಧ್ಯಮಯ ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಕಲಾವಿದರ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ.
ಸಂಜೆ 5.30ಗಂಟೆಗೆ ಕರಾವಳಿ ಉತ್ಸವ ಮೈದಾನದಲ್ಲಿ ಕರಾವಳಿ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಉದ್ಘಾಟನಾ ಕಾರ್ಯಕ್ರಮದ ಬಳಿಕ ಡಿಸೆಂಬರ್ 21 ಮತ್ತು 22 ರಂದು ವಿದ್ಯುದ್ದೀಪಗಳಿಂದ ಅಲಂಕೃತವಾದ ವೇದಿಕೆಯಲ್ಲಿ ಪ್ರಸಿದ್ಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ ಎಂದರು.
ಬೀಚ್ ಉತ್ಸವ :
ಡಿಸೆಂಬರ್ 28 ಮತ್ತು 29ರಂದು ತಣ್ಣೀರು ಬಾವಿ ಬೀಚ್ ನಲ್ಲಿ ಬೀಚ್ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 28ರಂದು ಸಂಜೆ 6ಕ್ಕೆ ಬೀಚ್ ಉತ್ಸವ ಉದ್ಘಾಟನೆಗೊಳ್ಳಲಿದೆ. ಸಂಜೆ 6.30ರಿಂದ ವಿವಿಧ ತಂಡಗಳ ನೃತ್ಯ ಪ್ರದರ್ಶನಗಳು ನಡೆಯಲಿವೆ.
ಹೊಸ ತಲೆಮಾರಿನ ವಿಶಿಷ್ಟ ಸಂಗೀತ ಸಂಯೋಜಕರು ಮತ್ತು ಗಾಯಕರಾಗಿರುವ ರಘು ದೀಕ್ಷಿತ್ ಅವರ ತಂಡದ ಕಾರ್ಯಕ್ರಮ 8ಗಂಟೆಗೆ ಪ್ರಾರಂಭವಾಗಲಿದ್ದು ಸಾರ್ವಜನಿಕರನ್ನು ರಂಜಿಸಲಿದೆ.
ಡಿಸೆಂಬರ್ 29ರಂದು ಪೂರ್ವಾಹ್ನ 5:30ಕ್ಕೆ ಯೋಗ, 6:30ಕ್ಕೆ ಜುಂಬ (ಏರೋನಾಟಿಕ್ಸ್) ಮತ್ತು 9ರಿಂದ ಬೀಚ್ ಸ್ಪೋರ್ಟ್ಸ್ ಮುಂತಾದ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಸಂಜೆ 5:30ಕ್ಕೆ ಆನ್ಸೆನ್ ಸ್ಪರ್ಧೆ ಮೂಲಕ ನೃತ್ಯ ಪ್ರದರ್ಶನ ನಡೆಯಲಿದೆ ಮತ್ತು ರಾತ್ರಿ 8 ಗಂಟೆಗೆ ಶೋರ್ ಬ್ಯಾಂಡ್ ಪ್ರದರ್ಶನಗಳು ನಡೆಯಲಿವೆ. ಯುವ ಜನತೆಗೆ ಇದೊಂದು ವಿಶಿಷ್ಟ ಅವಕಾಶವಾಗಿದೆ ಎಂದರು.
ಜನವರಿ 4 ಮತ್ತು 5 ರಂದು ಕದ್ರಿ ಪಾರ್ಕ್‌ನಲ್ಲಿ ಆಟೋ ಮೊಬೈಲ್ ಮತ್ತು ಶ್ವಾನ ಪ್ರದರ್ಶನ ನಡೆಯಲಿದೆ. ಜನವರಿ 11 ಮತ್ತು 12 ರಂದು ಕದ್ರಿ ಪಾರ್ಕ್‌ನಲ್ಲಿ ಯುವ ಉತ್ಸವ ನಡೆಯಲಿದೆ. ಜನವರಿ 18 ಮತ್ತು 19 ರಂದು ತಣ್ಣೀರು ಬಾವಿ ಬೀಚ್‌ನಲ್ಲಿ ಸುಪ್ರಸಿದ್ಧ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ ಎಂದರು.
PublicNext
18/12/2024 06:29 pm