ಕೊಡಗು: ಕೊಡಗಿನ ಪುತ್ತರಿ ನಮ್ಮೆಯ ಆಚರಣೆಗೆ ಸಂಬಂಧಿಸಿದಂತೆ ಮಹಿಳೆಯರು ಗದ್ದೆಯಿಂದ ತಂದ ಭತ್ತವನ್ನು ಮರದ ವನಕೆಯಿಂದ ಕುಟ್ಟಿ ಶುದ್ಧಗೊಳಿಸುವಾಗ ಭತ್ತ ಕುಟ್ಟೋಣ ಬನ್ನಿ.. ಎಂಬ ಹಾಡಿನ ಮೂಲಕ ಪುರಾತನ ಆಚರಣೆಯನ್ನು ಅನಾವರಣಗೊಳಿಸಿದ್ದಲ್ಲದೇ ಮಹಿಳೆಯರು ಕಾಫಿಯನ್ನು ಕುಟ್ಟಿ ಪುಡಿಗೊಳಿಸಿ ತಯಾರಿಸಿದ ಕೊಡಗಿನ ಬೆಲ್ಲಕಾಫಿಯನ್ನು ಎಲ್ಲರಿಗೂ ನೀಡಿದ್ದು ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ನಡೆದ ಪುತ್ತರಿನಮ್ಮೆರ ಊರೊರ್ಮೆ ಕೂಟದ ವಿಶೇಷ ಆಕರ್ಷಣೆಯಾಗಿತ್ತು.
ತಳಿಯತಕ್ಕಿ ದೀಪ ಹಿಡಿದ ಮಹಿಳೆಯರು, ದುಡಿಕೊಟ್ಟ್ ಹಾಡಿನೊಂದಿಗೆ ಸಮಾಜದ ಅಧ್ಯಕ್ಷರಾದ ಮುಳ್ಳಂಡರತ್ತು ಚಂಗಪ್ಪನವರು ಕುತ್ತಿಹಿಡಿದು ಸಾಂಪ್ರದಾಯಿಕವಾಗಿ ಸಭಾಂಗಣಕ್ಕೆ ಬರುವಾಗ ಮುಳ್ಳಂಡ ಪ್ರೇಮಾ ಅಯ್ಯಪ್ಪ ಅಕ್ಕಿಹಾಕಿ ಸ್ವಾಗತಿಸಿದರು. ಸಮಾಜದ ಉಪಾಧ್ಯಕ್ಷರು ಹಾಗೂ ಹಿರಿಯರಾದ ಬಿದ್ದಂಡ ಮಾದಯ್ಯ, ರಾಧಮಾದಯ್ಯ ದಂಪತಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾಜದ ನಿರ್ದೇಶಕಿ ಮುಳ್ಳಂಡ ಮಾಯಮ್ಮ ತಮ್ಮಯ್ಯ ಪ್ರಾರ್ಥಿಸಿದರು. ಜೋಮಾಲೆ ಪೊಮ್ಮಕ್ಕಡ ಕೂಟದಿಂದ ಉಮ್ಮತಾಟ್, ಕೋಲಾಟ್ ಹಾಗು ವಾಲಗತಾಟ್ ಪ್ರದರ್ಶನ, ಕೊಡವ ಹಾಡುಗಾರಿಕೆ ನಡೆಯಿತು. ಪುರುಷರಿಗೆ ಹಾಗೂ ಮಹಿಳೆಯರಿಗೆ ಒಳಾಂಗಣ ಕ್ರೀಡೆ ನಡೆಯಿತು.
PublicNext
18/12/2024 12:46 pm