ಹೊಳೆನರಸೀಪುರ: ರಸ್ತೆಬದಿ ಪಾನಿಪುರಿ, ಗೋಬಿ ಮಂಚೂರಿ ಮಾರುವವರು ನನಗಿಂತ ಸಂತೋಷವಾಗಿದ್ದಾರೆ. ಒಮ್ಮೊಮ್ಮೆ ನಾನೂ ಕೆಲಸ ಬಿಟ್ಟು ಪಾನಿಪುರಿ ಮಾರಿಕೊಂಡಿದ್ದರೆ ಹೆಚ್ಚು ನೆಮ್ಮದಿ ಎನಿಸಿಬಿಡುತ್ತದೆ ಎಂದು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. 'ಪಾನಿಪುರಿ ಮಾರುವವರು ಹೆಂಡತಿ, ಮಕ್ಕಳೊಂದಿಗೆ ಯಾವಾಗ, ಎಲ್ಲಿಗೆ ಬೇಕಾದರೂ ನಿಶ್ಚಿಂತೆಯಿಂದ ಹೋಗಬಹುದು. ಅಂತಹ ಸಂತೋಷ ಹಾಗೂ ಅವಕಾಶ ನನಗೆ ಇಲ್ಲವೇ ಇಲ್ಲ' ಎಂದು ವಿಷಾದಿಸಿದರು.
'ಅಷ್ಟು ಒತ್ತಡ ಸಹಿಸಿಕೊಂಡು ಕೆಲಸ ಮಾಡುತ್ತಿದ್ದೇವೆ. ಅನೇಕರಿಗೆ ರಕ್ತದೊತ್ತಡ, ಮಧುಮೇಹ ಬಂದು ಲಿವರ್, ಕಿಡ್ನಿ ಎಲ್ಲ ಹಾಳಾಗಿವೆ. ಕಂದಾಯ ಇಲಾಖೆಯ ಎಲ್ಲ ನೌಕರರೂ, ಮೇಲಧಿಕಾರಿಗಳು ಕೇಳುವ ವಿವರಗಳನ್ನು ಅಪ್‌ಲೋಡ್ ಮಾಡೀ ಮಾಡೀ ಡೌನ್ ಆಗಿಬಿಟ್ಟಿದ್ದಾರೆ" ಎಂದರು.
'ಒಬ್ಬ ವ್ಯಕ್ತಿ ತನಗೆ ಸಾಧ್ಯವಿರುವಷ್ಟು ಒತ್ತಡ ತಡೆದುಕೊಳ್ಳಬಹುದು. ಅತಿಯಾದ ಒತ್ತಡ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೌಕರರಿಗೆ ಇಷ್ಟೊಂದು ಒತ್ತಡ ನೀಡುವುದು ಸರಿಯೇ ಎಂದು ಸರ್ಕಾರಿ ನೌಕರರ ಸಂಘದವರು ಎದೆಯುಬ್ಬಿಸಿ, ಧೈರ್ಯವಾಗಿ ಸರ್ಕಾರವನ್ನು ಕೇಳುವಂತಾಗಬೇಕು' ಎಂದರು.
'ಶಿಕ್ಷಕರು ವಿದ್ಯಾರ್ಥಿಗಳಿಗೆ ಬರುವ ಮೊಟ್ಟೆಗಳನ್ನು ಬೇಯಿಸಿ, ತಿನ್ನಿಸಿ ಬೆಂದು ಹೋಗುತ್ತಿದ್ದಾರೆ. ಕೆಲವು ಇಲಾಖೆಗಳಲ್ಲಿ 4-5 ಜನ ಮಾಡುವ ಕೆಲಸವನ್ನು ಒಬ್ಬರೋ, ಇಬ್ಬರೋ ಮಾಡುವ ಅನಿವಾರ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಅನೇಕರು ಸರ್ಕಾರಿ ಕೆಲಸದಿಂದ ವಿಮುಖರಾಗುತ್ತಿದ್ದಾರೆ' ಎಂದು ಹೇಳಿದರು.
'ಇಂತಹ ಪರಿಸ್ಥಿತಿಯಿಂದ ನೌಕರರನ್ನು ಹೊರತರಲು ಸಂಘಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು' ಎಂದು ಕಿವಿಮಾತು ಹೇಳಿದರು.
ಸಂಘಗಳು ಇಲ್ಲದಿದ್ದರೆ ಸರ್ಕಾರಿ ನೌಕರರು ಶೋಷಣೆಗೆ ಒಳಗಾಗುತ್ತಿದ್ದರು. ಶೋಷಣೆಯನ್ನು ತಪ್ಪಿಸಲು ಸಂಘವು ನಿರಂತರ ಹೋರಾಡಬೇಕು ಎಂದರು.
Kshetra Samachara
15/12/2024 05:40 pm