ಬೆಳಗಾವಿ: ಚಳಿಗಾಲ ಅಧಿವೇಶನ ನಡೆಯುತ್ತಿರುವ ಬೆಳಗಾವಿ ಸುವರ್ಣ ವಿಧಾನಸೌಧ ಈಗ ಶೈಕ್ಷಣಿಕ ಪ್ರವಾಸಿ ಕೇಂದ್ರವಾಗಿ ಮಾರ್ಪಟ್ಟಿದೆ. ನಾಡಿನ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಕಲಾಪ ಕಣ್ತುಂಬಿಕೊಂಡು ಸಂಭ್ರಮಿಸುತ್ತಿದ್ದಾರೆ.
ಡಿ.9ರಿಂದ ಆರಂಭವಾಗಿರುವ ಅಧಿವೇಶನ ಮಾಜಿ ಸಿಎಂ ಎಸ್.ಎಂ.ಕೃಷ್ಣಾ ನಿಧನರಾದ ಹಿನ್ನೆಲೆಯಲ್ಲಿ ನಿನ್ನೆ ಬುಧವಾರ ಕಲಾಪವನ್ನು ರದ್ದುಗೊಳಿಸಲಾಗಿತ್ತು. ಅಧಿವೇಶನ ಶುರುವಾಗುತ್ತಿದ್ದಂತೆ ವಿದ್ಯಾರ್ಥಿಗಳ ದಂಡು ಸೌಧಕ್ಕೆ ಲಗ್ಗೆ ಇಟ್ಟಿತ್ತು. ಸರ್ಕಾರ ಮತ್ತು ಮಂತ್ರಿ ಮಹೋದಯರು ಕಲಾಪದಲ್ಲಿ ಮಾತನಾಡುವುದನ್ನು ಸಮೀಪದಿಂದ ಆಲಿಸಿ ಸಂತಸ ಪಟ್ಟರು.
ಬೆಳಗಾವಿ ಜಿಲ್ಲೆ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಶಾಲೆಗಳ 600ಕ್ಕೂ ಅಧಿಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇಂದು ಅಧಿವೇಶನ ವೀಕ್ಷಿಸಿದರು. ಇವರಿಗೆ ಸೌಧದಲ್ಲಿ ಉಚಿತವಾಗಿ ಜ್ಯೂಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಬಹುತೇಕ ಮಕ್ಕಳು ಇದೇ ಮೊದಲ ಬಾರಿ ಸೌಧಕ್ಕೆ ಬಂದ ಖುಷಿಯಲ್ಲಿ ತೇಲಾಡಿದರು. ಫೋಟೋ ಕ್ಲಿಕ್ಕಿಸಿಕೊಂಡು ಸಖತ್ ಎಂಜಾಯ್ ಮಾಡಿದರು.
ರಾಜ್ಯದಲ್ಲಿನ ಸಮಸ್ಯೆಗಳ ಬಗ್ಗೆ ನಾಯಕರು ಚರ್ಚಿಸುತ್ತಿದ್ದರು. ಯಾವ ರೀತಿ ಇನ್ನು ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಬೇಕೆಂದು ತಮ್ಮ ಅಭಿಪ್ರಾಯ ತಿಳಿಸುತ್ತಿದ್ದರು. ಇದೇ ಮೊದಲ ಬಾರಿ ನನಗೆ ಕಲಾಪದಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿತು. ಡಿ.ಕೆ.ಶಿವಕುಮಾರ್ ಅವರು ಮಾತಾಡೋದು ನೋಡಿದೆ. ಹಾಗಾಗಿ, ಹೇಗೆ ಅವರನ್ನು ನೋಡೋಕೆ ನಾವೆಲ್ಲಾ ಬಂದಿದ್ದೇವೆ. ಅದೇ ರೀತಿ ನಮ್ಮನ್ನು ಜನ ನೋಡಲು ಬರುವಂತೆ ನಾವು ಉನ್ನತ ಸ್ಥಾನಕ್ಕೆ ಬರಬೇಕು ಎಂದು ಆಸೆ ಹುಟ್ಟಿತು ಎಂಬುದು ವಿದ್ಯಾರ್ಥಿಗಳು ಮಾತಾಗಿದೆ.
PublicNext
15/12/2024 09:41 am