ಬೆಳಗಾವಿ : ಸಿಂಗಾರಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್ ನಲ್ಲಿ ಅಗ್ರ ಶ್ರೇಯಾಂಕಿತ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಟ್ಟವನ್ನು ಮುಡಿಗೇರಿಸಿಕೊಂಡ ಭಾರತದ ಗ್ರ್ಯಾಂಡ್ ಮಾಸ್ಟರ್ ಡಿ. ಗುಕೇಶ್ ಅವರಿಗೆ ಸಚಿವ ಕೃಷ್ಣ ಬೈರೇಗೌಡ ಸರ್ಕಾರದ ಪರವಾಗಿ ಅಭಿನಂದಿಸಿದರು.
ವಿಧಾನಸಭೆ ಕಲಾಪದ ಕೊನೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರು ನೂತನ ಚೆಸ್ ಚಾಂಪಿಯನ್ ಗುಕೇಶ್ ಅವರ ಸಾಧನೆಯ ಬಗ್ಗೆ ಸದನದ ಗಮನ ಸೆಳೆದರು. ಅಲ್ಲದೆ, ಯುವ ಚೆಸ್ ಕ್ರೀಡಾಪಟುವನ್ನು ಅಭಿನಂದಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಕೃಷ್ಣ ಬೈರೇಗೌಡ, ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ 14ನೇ ಮತ್ತು ಅಂತಿಮ ಸುತ್ತಿನ ಪಂದ್ಯದಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ.ಗುಕೇಶ್ ಅವರು ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. 18ನೇ ವಯಸ್ಸಿಗೆ ಚಾಂಪಿಯನ್ ಆಗುವ ಮೂಲಕ ಚೆಸ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಚೆಸ್ ಪಟು ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ.
ಅಲ್ಲದೆ, ವಿಶ್ವನಾಥನ್ ಆನಂದ್ ನಂತರ ಈ ಸಾಧನೆ ಮಾಡಿದ ಮೊದಲ ಚೆಸ್ ಕ್ರೀಡಾಪಟು ಗುಕೇಶ್ ಎಂಬುದು ವಿಶೇಷ.ಅವರ ಈ ಸಾಧನೆ ದೇಶಕ್ಕೆ ಹೆಮ್ಮೆ ನೀಡುವಂತದ್ದು. ದೇಶದಲ್ಲಿ ಚೆಸ್ ಸೇರಿದಂತೆ ಇತರೆ ಕ್ರೀಡೆಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಬೇಕಿದೆ. ಗುಕೇಶ್ ಅವರಿಗೆ ಸರ್ಕಾರದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲು ನನಗೆ ಸಂತೋಷವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
PublicNext
13/12/2024 09:44 pm