ತುಮಕೂರು: ವಿದ್ಯುತ್ ಮೀಟರ್ ವಾಪಸ್ ನೀಡಲು ₹1.40 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ₹15 ಸಾವಿರ ತೆಗೆದುಕೊಳ್ಳುವಾಗ ಬೆಸ್ಕಾಂ ಜಾಗೃತ ದಳದ ಕಾನ್‌ಸ್ಟೇಬಲ್ ಕೃಷ್ಣಮೂರ್ತಿ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಬೆಸ್ಕಾಂ ಜಾಗೃತ ದಳದವರು ಸೆ. 21ರಂದು ಗುಬ್ಬಿ ತಾಲ್ಲೂಕಿನ ಕಡಬಾ ಹೋಬಳಿಯ ಕೆ.ಮತ್ತಿಘಟ್ಟ ಗ್ರಾಮದ ಎಂ.ಜಿ.ಬಸವರಾಜು ಅವರಿಗೆ ಸೇರಿದ ಮಂಜುನಾಥ ಅರೇಕಾ ಪ್ಲೇಟ್ಸ್ ತಯಾರಿಕಾ ಶೆಡ್ ಮೇಲೆ ದಾಳಿ ನಡೆಸಿದ್ದರು. ಶೆಡ್‌ನಲ್ಲಿ ಅಳವಡಿಸಿದ್ದ ವಿದ್ಯುತ್ ಮೀಟರ್ ವಶಕ್ಕೆ ಪಡೆದಿದ್ದರು. ಈ ಮೀಟರ್ ವಾಪಸ್ ನೀಡಲು ₹1.40 ಲಕ್ಷ ಲಂಚ ಕೊಡುವಂತೆ ಕೃಷ್ಣಮೂರ್ತಿ ಒತ್ತಾಯಿಸಿದ್ದರು.
ಬಸವರಾಜು ನ. 30ರಂದು ₹85 ಸಾವಿರ, ಡಿ. 7ರಂದು ₹40 ಸಾವಿರ ಕೊಟ್ಟಿದ್ದರು. ಬಾಕಿ ಹಣ ನೀಡಿದರೆ ಮಾತ್ರ ವಿದ್ಯುತ್ ಮೀಟರ್ ಮರಳಿಸುವುದಾಗಿ ಹೇಳಿದ್ದರು. ಲಂಚಕ್ಕೆ ಒತ್ತಾಯಿಸಿದ್ದರಿಂದ ಬೇಸತ್ತು ಬಸವರಾಜು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ನಗರದ ಬಿಜಿಎಸ್ ವೃತ್ತದ ಬಳಿಯ ಖಾಸಗಿ ಹೋಟೆಲ್‌ನಲ್ಲಿ ₹15 ಸಾವಿರ ಹಣ ತೆಗೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಕೃಷ್ಣಮೂರ್ತಿಯನ್ನು ಬಂಧಿಸಿದ್ದಾರೆ.
Kshetra Samachara
14/12/2024 08:28 am