ತುಮಕೂರು
ಪ್ರಸ್ತುತ ವಿದ್ಯಮಾನದಲ್ಲಿ ವಿದ್ಯಾರ್ಥಿಗಳಲ್ಲಿ ಸ್ಪೋಕನ್ ಇಂಗ್ಲೀಷ್ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವುದರಿಂದ ಮಕ್ಕಳಿಗೆ ವಿವಿಧ ಭಾಷೆಗಳ ಕಲಿಕೆ ಬಗ್ಗೆ ಅರಿವು ಮೂಡಿಸುವುದರ ಬಗ್ಗೆ ಶಿಕ್ಷಕರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ ತಿಳಿಸಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ಮತ್ತು ವ್ಯಕ್ತಿತ್ವ ವಿಕಸನದ ತರಗತಿ ನಡೆಸಲು ಸ್ಫೂರ್ತಿಯ ನಡೆ ಎಂಬ ಕಾರ್ಯಕ್ರಮದ ಮಾರ್ಗಸೂಚಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದ ಅವರು ಆಧುನಿಕ ಜಗತ್ತಿನಲ್ಲಿ ಇಂಗ್ಲೀಷ್ ವ್ಯವಹಾರಿಕ ಭಾಷೆಯಾಗಿ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಆದ್ದರಿಂದ ಪ್ರತೀ ಮಗು ಕೂಡ ಇಂಗ್ಲಿಷ್ ಕಲಿಯುವುದು ಅವಶ್ಯಕವಾಗಿದೆ. ಇಂಗ್ಲಿಷ್ ಮಾತನಾಡುವುದನ್ನು ಕಲಿಯಲು ಇದೀಗ ಆನ್‌ಲೈನ್‌ನಲ್ಲಿ ಬಹಳಷ್ಟು ಆ್ಯಪ್‌ಗಳು ಲಭ್ಯವಿದ್ದು, ಶಿಕ್ಷಕರು ಮಕ್ಕಳ ಬಳಕೆಗೆ ಯೋಗ್ಯವಾದ ಆ್ಯಪ್‌ಗಳನ್ನು ಸೂಚಿಸಬೇಕು ಎಂದರು.
ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ಬಗ್ಗೆ ತರಬೇತಿ ನೀಡಲು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಇಂಗ್ಲೀಷ್ ಉಪನ್ಯಾಸಕರ ಕೊರತೆ ಇರುವ ಹಿನ್ನೆಲೆಯಲ್ಲಿ ಸರ್ಕಾರಿ ಪದವಿ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕರು, ವಸತಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಇಂಗ್ಲೀಷ್ ಉಪನ್ಯಾಸಕರು/ಶಿಕ್ಷಕರನ್ನು ತರಬೇತಿ ನೀಡಲು ಪರಿಗಣಿಸಲಾಗುವುದು ಎಂದರು.
ಮಕ್ಕಳಿಗೆ ವ್ಯಕ್ತಿತ್ವ ವಿಕಸನ ತರಗತಿಗಳು : ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ಗ್ರಾಮೀಣಾಭಿವೃದ್ಧಿಯ ವಿವಿಧ ಇಲಾಖೆಗಳ ಸ್ವರೂಪ, ಮೂಲ ಜವಾಬ್ದಾರಿ, ಉದ್ದೇಶ, ಅನುಷ್ಠಾನ ವಿಧಾನ, ಆಡಳಿತ ವ್ಯವಸ್ಥೆ, ಇಲಾಖೆಯ ವಿಶೇಷ ಸಾಧನೆಗಳ ಬಗ್ಗೆ ಮಕ್ಕಳಿಗೆ ತರಗತಿ ನಡೆಸಬೇಕು ಎಂದರು. ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಬಗ್ಗೆ ಮೇಲ್ವಿಚಾರಣೆ ಮಾಡಬೇಕು ಹಾಗೂ ಇಲಾಖೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ಮಕ್ಕಳಿಗೆ ಮಾಹಿತಿ ತರಗತಿ ನಡೆಸಬೇಕು ಎಂದರು.
ವಸತಿ ನಿಲಯಗಳ ಮೇಲ್ವಿಚಾರಕರು ನಿಲಯಗಳ ಸ್ವಚ್ಛತೆ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳಿಗೆ ಸರಿಯಗಿ ಮತ್ತು ಯೋಗ್ಯವಾದ ಆಹಾರವನ್ನು ನೀಡುವಂತೆ ತಿಳಿಸಿದರು. ರಾಷ್ಟ್ರೀಯ ಕಾರ್ಯಕ್ರಮದಡಿ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಬೇಕು. ಹಾಸ್ಟೆಲ್ ಮಕ್ಕಳು ಲಭ್ಯವಿರುವ ವೇಳೆ (ಸಂಜೆ 6ರಿಂದ 9ಗಂಟೆ) ಮಕ್ಕಳನ್ನು ತಪಾಸಣೆ ಮಾಡುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿ(ಅಭಿವೃದ್ಧಿ) ಸಂಜೀವಪ್ಪ, ಉಪಕಾರ್ಯದರ್ಶಿ(ಆಡಳಿತ) ಹಾಲಸಿದ್ದಪ್ಪ ಪೂಜೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸೋನಿಯಾ ವರ್ಣೆಕರ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.
Kshetra Samachara
10/12/2024 06:30 pm