ಬೀದರ್: ಔರಾದ್ ತಾಲ್ಲೂಕಿನ ಸಂತಪುರದ ಮೊರಾರ್ಜಿ ದೇಸಾಯಿ ವಸತಿ ನಿಲಯದ ಊಟದಲ್ಲಿ ಹುಳು ಪ್ರತ್ಯಕ್ಷವಾಗಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಮೇಲ್ವಿಚಾರಕರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಮೇಲ್ವಿಚಾರಕ ಶಿವಕುಮಾರ್ ಮತ್ತು ಮುಖ್ಯೋಪಾಧ್ಯಾಯ ಭಗವಂತ ಕಾಂಬಳೆ ಸೇರಿ ಒಬ್ಬ ವಿದ್ಯಾರ್ಥಿಯ ಬೆನ್ನಿನ ಮೇಲೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾರೆ. ಇನ್ನೊಬ್ಬ ವಿದ್ಯಾರ್ಥಿಯ ಕೈ ಮೇಲೆ ಬಾಸುಂಡೆ ಬರುವಂತೆ ಹೊಡೆದಿದ್ದಾರೆ ಎನ್ನಲಾಗಿದೆ. ಈ ಹಲ್ಲೆಯನ್ನು ಖಂಡಿಸಿ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿ ನಮಗೆ ರಕ್ಷಣೆ ನೀಡಿ ಎಂದು ಆಗ್ರಹಿಸಿದ್ದಾರೆ.
ಪೌಷ್ಠಿಕಾಂಶವಿಲ್ಲದ ಆಹಾರ ನೀಡಲಾಗುತ್ತಿದ್ದು, ಆಹಾರದಲ್ಲಿ ಹುಳಗಳು ಸಿಗುತ್ತಿರುವುದನ್ನು ಪ್ರಶ್ನೆ ಮಾಡಿದರೆ, ನಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಕ್ಕಳನ್ನು ಯಾಕೆ ಹಲ್ಲೆ ಮಾಡಿದ್ದೀರಿ ಎಂದು ಕೇಳಿದರೆ ವರ್ಗಾವಣೆ ಪ್ರಮಾಣ ಪತ್ರ ತೆಗೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಮಕ್ಕಳ ವರ್ಗಾವಣೆ ಪ್ರಮಾಣ ಪತ್ರ ತೆಗೆದುಕೊಂಡು ಎಲ್ಲಿಗೆ ಹೋಗಬೇಕು ಎಂದು ಪೋಷಕರು ಶಾಲಾ ಶಿಕ್ಷಕರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳ ಮೇಲೆ ಹಲ್ಲೆ ಮಾಡಿದ ಇಬ್ಬರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
PublicNext
11/12/2024 10:17 pm