ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ ‘ಅರೆ ವಿಶೇಷ ಕೊಠಡಿ’ಯನ್ನು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು.
ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದ ಹಳೇ ಕಟ್ಟಡದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಅರೆ ವಿಶೇಷ ಕೊಠಡಿಯನ್ನು ಸ್ಥಾಪಿಸಲಾಗಿದ್ದು, ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಶೇಷ ಆರೋಗ್ಯ ಸೇವೆ ಕಲ್ಪಿಸಲಾಗುವುದು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಹೊಸದಾಗಿ ಒಳರೋಗಿಗಳಿಗೆ ಚೀಟಿ ಬದಲಾಗಿ ರೋಗಿಗೆ ಎಲ್ಲಾ ರೀತಿಯ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ಮಾಹಿತಿ ದೊರೆಯುವಂತಾಗಲು ‘ಪುಸ್ತಕ’ವನ್ನು ಶಾಸಕರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಪುಸ್ತಕದಲ್ಲಿ ಪ್ರಯೋಗಾಲಯ ವರದಿ, ಎಕ್ಸರೇ, ಯುಎಸ್‍ಜಿ ವರದಿ, ಸಿಟಿ ಸ್ಕ್ಯಾನ್ ವರದಿ, ಸಿಟಿ ಫಿಲ್ಮ್ ವರದಿ, ಎಂಆರ್‍ಐ ಫಿಲ್ಮ್ ವರದಿ, ವಾರ್ಡ್ ಆರೋಗ್ಯ ಸೇವೆ ಸಂಬಂಧಿಸಿದಂತೆ ಮಾಹಿತಿ ಒಳಗೊಂಡಿದೆ. ಸಾಮಾನ್ಯ ವಿಭಾಗ, ಒಟಿ, ವಾರ್ಡ್ ಸೇವಾ ಶುಲ್ಕಗಳು, ರೋಗಿಯ ಆರೋಗ್ಯ ಸಂಬಂಧ ಸಂಪೂರ್ಣ ವಿವರ, ಕ್ಲಿನಿಕಲ್ ಚಾರ್ಟ್, ಡಿಸ್ಚಾರ್ಜ್ ಮಾಹಿತಿ, ಒಳರೋಗಿಗಳಿಗೆ ಆಹಾರದ ಮೆನು ಹೀಗೆ ಹಲವು ಮಾಹಿತಿಯನ್ನು ಒಳಗೊಂಡ ಪುಸ್ತಕವನ್ನು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಶಾಸಕ ಡಾ.ಮಂತರ್ ಗೌಡ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗಿದೆ. ಆ ನಿಟ್ಟಿನಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ರೋಗಿಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
PublicNext
04/12/2024 08:49 pm