ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕಿನ ಕೆಲವು ಪ್ರಾಥಮಿಕ ಶಾಲೆಗಳಲ್ಲಿ ಮಧ್ಯಾಹ್ನದ ಉಪಾಹಾರ ಯೋಜನೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಇಲ್ಲಿನ ಹೊಳಲೂರು ಸರ್ಕಾರಿ ಶಾಲೆಯಲ್ಲಿ ನಿಯಮ ಬಾಹಿರವಾಗಿ ಶಾಲೆಯ ದಾಖಲಾತಿಯ ಮಕ್ಕಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾತಿ ತೋರಿಸಿ ಅಕ್ಕಿ, ಬೇಳೆಯನ್ನು ಇಲ್ಲಿನ ಮುಖ್ಯ ಶಿಕ್ಷಕರು ತಮ್ಮ ಮನೆಗಳಿಗೆ ಕೊಂಡೊಯ್ಯುವುದು, ಇಲ್ಲವೇ ಮಾರಾಟ ಮಾಡಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಶಾಲೆಯಲ್ಲಿ ಕೊಳೆತ ತರಕಾರಿಗಳನ್ನು ಉಪಯೋಗಿಸಿ, ಸಾಂಬಾರ್ ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಶಾಲೆಯಲ್ಲಿದ್ದ ಬೇಳೆಯಲ್ಲಿ ಸಂಪೂರ್ಣವಾಗಿ ಹುಳಗಳು ಕೂಡ ಕಂಡು ಬಂದಿದ್ದು, ಈ ಶಾಲೆಯಲ್ಲಿ ಹೊಸ ಬೇಳೆ ಮಾರಿಕೊಂಡಿದ್ದಾರೆಂಬ ಆರೋಪವೂ ಇದೆ.
ಇನ್ನು ನ್ಯೂಮಂಡ್ಲಿ ಸರ್ಕಾರಿ ಉರ್ದು ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟಕ್ಕೆ ಸಂಬಂಧಿಸಿದಂತೆ, ಸಾಕಷ್ಟು ಅವ್ಯವಹಾರ ನಡೆಯುತ್ತಿದೆ ಎಂಬ ದೂರು ಕೇಳಿ ಬಂದಿದ್ದು, ಬಿಸಿಯೂಟದಲ್ಲೂ ಭ್ರಷ್ಟಾಚಾರ ನಡೆಯುತ್ತದೆ ಎಂದರೆ ನಮ್ಮ ಶಿಕ್ಷಣ ವ್ಯವಸ್ಥೆ ಎಷ್ಟರ ಮಟ್ಟಿಗೆ ಕುಸಿಯುತ್ತಿದೆ ಎಂಬುದು ಪ್ರಶ್ನಾರ್ಹವಾಗಿದೆ.
ದೂರು ಬಂದಾಗ ಕಾಟಾಚಾರಕ್ಕೆ ತಾತ್ಕಾಲಿಕ ವರ್ಗಾವಣೆ ಮಾಡುವ ಇಲಾಖೆ, ಮತ್ತೆರಡು ತಿಂಗಳು ಬಳಿಕ ಮತ್ತೆ ಅದೇ ಶಾಲೆಗೆ ವಾಪಸ್ಸಾಗಿ ಮತ್ತೆ ಅಕ್ಕಿ, ಬೇಳೆ ಕದಿಯುತ್ತಾರೆ. ಶಿಕ್ಷಕರೇ ಈ ರೀತಿ ಮಾಡಿದರೆ ಶಿಕ್ಷಣದ ವ್ಯವಸ್ಥೆ ಹೇಗೆ ಬದಲಾಗಲು ಸಾಧ್ಯ ಎಂಬುದು ಪ್ರಶ್ನೆಯಾಗಿದೆ.
ಒಟ್ಟಾರೆ, ಒಳ್ಳೆಯ ಶಾಲೆಗಳು, ಒಳ್ಳೆಯ ಶಿಕ್ಷಕರು ಇರುವ ಶಾಲೆಗಳ ನಡುವೆಯೂ, ಉಳಿದ ಶೇ.70ರಷ್ಟು ಶಾಲೆಗಳಲ್ಲಿ ಬಿಸಿಯೂಟದ ಅವ್ಯವಹಾರಗಳು ನಡೆಯುತ್ತಿವೆ. ಅಧಿಕಾರಿಗಳು ಶಿಕ್ಷಕರೊಂದಿಗೆ ಶಾಮೀಲಾಗಿರುವ ಶಂಕೆ ಇದ್ದು, ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗಮನ ಹರಿಸುತ್ತಾರಾ ? ಕಾದು ನೋಡಬೇಕಿದೆ.
PublicNext
01/12/2024 08:07 pm