Av
Headline
ಕೋಲಾರ - ಮಲ್ಲಸಂದ್ರ ಗ್ರಾಮದಲ್ಲಿ ಶ್ರೀಗಂಧ ಮರಗಳ ಕಳ್ಳತನ: ಪ್ರಕರಣ ದಾಖಲು
ಕೋಲಾರ - ಲಕ್ಷಾಂತರ ರೂಪಾಯಿ ಬೆಲೆಬಾಳುವ ಶ್ರೀಗಂಧದ ಮರಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ಮಲ್ಲಸಂದ್ರ ಗ್ರಾಮದಲ್ಲಿ ನಡೆದಿದೆ. ಮಲ್ಲಸಂದ್ರ ಗ್ರಾಮದ ಬಚ್ಚಣ್ಣ ಎಂಬುವರಿಗೆ ಸೇರಿದ ತೋಟದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸುಮಾರು 30 ಶ್ರೀಗಂಧದ ಮರಗಳನ್ನು ಖದೀಮರು ಕದ್ದೊಯ್ದಿದ್ದಾರೆ. ಮೊದಲಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ನಂತರ ತೋಟದ ಮೂರ್ನಾಲ್ಕು ಕಡೆ ವಿದ್ಯುತ್ ತಂತಿ ಬೇಲಿಯನ್ನು ಕತ್ತರಿಸಿ ಒಳನುಗ್ಗಿದ ಖದೀಮರು ಸಿಕ್ಕಸಿಕ್ಕ ಕಡೆಯೆಲ್ಲಾ ಬೆಲೆಬಾಳುವ ಗಂಧದ ಮರಗಳನ್ನು ಕಡಿದು ಪರಾರಿಯಾಗಿದ್ದಾರೆ. ಈ ಸಂಬಂಧ ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸರ್ಕಾರದಿಂದ ಅನುಮತಿ ಪಡೆದು ಕಳೆದ 16 ವರ್ಷಗಳ ಹಿಂದೆ ತಮ್ಮ 3.12 ಎಕರೆ ಜಮೀನಿನಲ್ಲಿ 1200 ಶ್ರೀಗಂಧದ ಗಿಡಗಳನ್ನು ನೆಡಲಾಗಿತ್ತು. ಶ್ರೀಗಂಧ ರಕ್ಷಣೆಗಾಗಿ ವಿದ್ಯುತ್ ತಂತಿ ಬೇಲಿ, ಸಿಸಿಟಿವಿ ಅಳವಡಿಸಿದ್ದರೂ, ಈಗಾಗಲೇ ಮೂರು ಬಾರಿ ಶ್ರೀಗಂಧದ ಮರಗಳು ಕಳ್ಳತನವಾಗಿದೆ. ಸಿಸಿಟಿವಿ ದೃಶ್ಯಾವಳಿ ಸಮೇತ ಈ ಬಗ್ಗೆ ವೇಮಗಲ್ ಪೊಲೀಸರಿಗೆ ದೂರು ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಈಗಲೂ ಸಹ ಲಕ್ಷಾಂತರ ರೂಪಾಯಿ ಮೌಲ್ಯದ ಶ್ರೀಗಂಧ ಮರಗಳನ್ನು ಕಡಿದುಕೊಂಡು ಹೋಗಿರುವುದರಿಂದ ತುಂಬಾ ನಷ್ಟವಾಗಿದೆ. ಸರ್ಕಾರ ಕೂಡಲೇ ಪರಿಹಾರ ಕೊಡಬೇಕೆಂದು ರೈತ ಬಚ್ಚಣ್ಣ ಒತ್ತಾಯ ಮಾಡಿದರು.
Kshetra Samachara
01/12/2024 06:34 pm