ಸಿದ್ದಾಪುರ : ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಯಾವೊಬ್ಬ ವಿದ್ಯಾರ್ಥಿಯೂ ಫೇಲ್ ಆಗಬಾರದು, ಫೇಲ್ ಎನ್ನುವ ಶಬ್ದ ಬರಬಾರದು ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಹಾಗೆ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ದಪಡಿಸುವ ಜವಾಬ್ದಾರಿ ಶಿಕ್ಷಕರಮೇಲಿದೆ ಎಂದು ಬಿಇಒ ಎಂ.ಎಚ್. ನಾಯ್ಕ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾ ಅಶೋಕ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ಶಿಕ್ಷಕರ ವಿಷಯಾಧಾರಿತ ಕಾರ್ಯಗಾರದಲ್ಲಿ ಅವರು ಗುರುವಾರ ಮಾತನಾಡಿದರು. ಪ್ರತಿಯೊಂದು ಪ್ರೌಢಶಾಲೆಯ ಶಿಕ್ಷಕರು ತಮ್ಮ ತಮ್ಮ ವಿಷಯದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಪೂರ್ವ ತಯಾರಿ ಮಾಡಿಸುವುದರ ಜತೆಗೆ ಅವರಲ್ಲಿ ಪರೀಕ್ಷೆಯನ್ನು ಎದುರಿಸುವ ಆತ್ಮವಿಶ್ವಾಸ ಮೂಡಿಸಬೇಕು.
ವಿಷಯವಾರು ಶಿಕ್ಷಕರು ತಮ್ಮ ವಿಷಯದಲ್ಲಿ ಹೇಗೆ ಪೂರ್ವತಯಾರಿ ಮಾಡಿಕೊಳ್ಳಬೇಕು ಎನ್ನುವುದನ್ನು ಅವರಿಗೆ ತಿಳಿಸಿಕೊಡಬೇಕು ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶಸ್ನೆಪತ್ರಿಕೆ ವಿನ್ಯಾಸ ರಚನೆಯ ಕುರಿತು ತರಬೇತಿ ಹೊಂದಿದ ಶಿಕ್ಷಕರಿಂದ ಶಿಕ್ಷಕರಿಗೆ ಮಾರ್ಗದರ್ಶನ ನೀಡಲಾಯಿತು. ಶಿಕ್ಷಕರ ಮೂರು ಗುಂಪುಗಳನ್ನು ರಚಿಸಿ ಪ್ರತಿ ಗುಂಪಿನಿಂದ ಪ್ರಶ್ನೆಪತ್ರಿಕೆಯನ್ನು ರಚಿಸಲಾಯಿತು. ತಾಲೂಕಿನ ಎಲ್ಲ ಪ್ರೌಢಶಾಲೆಗಳ ವಿಷಯಕ್ಕೆ ಸಂಬಂಧ ಪಟ್ಟ ಶಿಕ್ಷಕರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರೌಢಶಾಲಾ ವಿಭಾಗದ ಶಿಕ್ಷಣ ಸಂಯೋಜಕ ಮಂಜುನಾಥ ಶಾಸ್ತ್ರೀ , ಪ್ರೌಢಶಾಲಾ ಮುಖ್ಯಾಧ್ಯಾಪಕ ರಾಜೇಂದ್ರ ಕಾಂಬಳೆ ಉಪಸ್ಥಿತರಿದ್ದರು.
Kshetra Samachara
29/11/2024 07:47 pm