ನವದೆಹಲಿ : ನವೆಂಬರ್ 22ರಿಂದ ಆರಂಭವಾಗಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಶುಭಾರಂಭ ಕಂಡಿದೆ ಇದರ ನಡುವೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರು ಆಸ್ಟ್ರೇಲಿಯಾದಿಂದ ದಿಢೀರ್ ತವರಿಗೆ ವಾಪಸ್ ಆಗಿದ್ದಾರೆ.
ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸುತ್ತಿದ್ದಂತೆಯೇ, ವೈಯಕ್ತಿಕ ಕಾರಣ ನೀಡಿ ಗಂಭೀರ್ ಭಾರತದತ್ತ ಮುಖ ಮಾಡಿದ್ದಾರೆ. ಅಡಿಲೇಡ್ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಗೌತಮ್ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು, ಏನಾಗುತ್ತದೆ ಎಂದು ಕಾದು ನೋಡಬೇಕಿದೆ.
2025ರಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ದೃಷ್ಟಿಯಿಂದ ಈ ಸರಣಿ ಭಾರತಕ್ಕೆ ಬಹುಮುಖ್ಯವಾಗಿದ್ದು, ಇದರಲ್ಲಿ ಗೆಲುವು ಬಹುಮುಖ್ಯವಾಗಿದೆ. ಇದೀಗ ಮೊದಲ ಟೆಸ್ಟ್ ಸಂಭ್ರಮದ ನಡುವೆಯೇ ಗೌತಮ್ ಗಂಭೀರ್ ತವರಿಗೆ ವಾಪಸ್ ಆಗಿರುವುದು ಮ್ಯಾನೇಜ್ಮೆಂಟ್ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಡಿಸೆಂಬರ್ 6ರಂದು ಎರಡನೇ ಟೆಸ್ಟ್ ಪಂದ್ಯ ನಡೆಯಲಿದ್ದು, ಗಂಭೀರ್ ಅಷ್ಟರೊಳಗೆ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆ ಇದೆ. ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಆರಂಭಿಕ ಶುಭಮನ್ ಗಿಲ್ ಎರಡನೇ ಪಂದ್ಯಕ್ಕೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಅಷ್ಟರೊಳಗೆ ಗೌತಮ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, ವೈಯಕ್ತಿಕ ಕಾರಣಗಳನ್ನು ನೀಡಿ ಗಂಭೀರ್ ಅವರು ತವರಿಗೆ ಮರಳಲಿದ್ದು, ಎರಡನೇ ಟೆಸ್ಟ್ ಆರಂಭಕ್ಕೂ ಮುನ್ನ ತಂಡವನ್ನು ಸೇರಿಕೊಳ್ಳಲಿದ್ದಾರೆ. ಬಿಸಿಸಿಐ ಅವರ ಮನವಿಯನ್ನು ಸ್ವೀಕರಿಸಿದ್ದು , ಅವರಿಗೆ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
PublicNext
26/11/2024 02:55 pm