ಬೆಂಗಳೂರು : ರಾಜ್ಯದಲ್ಲಿ ನಡೆದ 3 ಕ್ಷೇತ್ರದ ಬೈ ಎಲೆಕ್ಷನ್ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಫಲಿತಾಂಶಕ್ಕಾಗಿ ಸಾಕಷ್ಟು ಕಾತುರದಿಂದ ಎಲ್ಲಾ ಪಕ್ಷಗಳು ಕಾಯುತ್ತಿವೆ. ಲೋಕಸಭಾ ಚುನಾವಣೆಯ ನಂತರ ನಡೆದ ಈ ಉಪಚುನಾವಣೆ ಎಲ್ಲಾ ಪಕ್ಷಗಳಿಗೂ ಒಂದು ರೀತಿ ಪ್ರತಿಷ್ಠಿಯಾಗಿದೆ.
ಮೂರು ಕ್ಷೇತ್ರದಲ್ಲಿ ಜಿದ್ದಾಜಿದ್ದಿನಿಂದ ಸ್ಪರ್ಧೆ ಏರ್ಪಟ್ಟಿತ್ತು ಅಂತಿಮವಾಗಿ ಮತದಾರ ಆಡಳಿತ ಪಕ್ಷಕ್ಕೆ ಜೈ ಎಂದಿದ್ದಾನೋ ಅಥವಾ ವಿಪಕ್ಷಗಳಿಗೆ ಜೈ ಎಂದಿದ್ದಾನೋ ನಾಳೆ ಫಲಿತಾಂಶದಿಂದ ತಿಳಿಯಲಿದೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನ ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು. ನಿಖಿಲ್ ಗೆಲುವಿಗಾಗಿ ಸಾಕಷ್ಟು ಕಸರತ್ತು ನಡೆಸಿದ ಕುಮಾರಸ್ವಾಮಿ ಕ್ಷೇತ್ರದಲ್ಲೇ ಇದ್ದು ಬಿಜೆಪಿ ನಾಯಕರನ್ನ ಕರೆದುಕೊಂಡು ನಿಖಿಲ್ ಪರ ಭರ್ಜರಿ ಪ್ರಚಾರ ನಡೆಸಿದ್ದರು. ತಮ್ಮಿಂದ ಕ್ಷೇತ್ರ ತೆರವಾದ ಸ್ಥಾನಕ್ಕೆ ಮತ್ತೆ ತಮ್ಮ ಪಕ್ಷವೇ ಅಲ್ಲಿ ಸ್ಥಾನ ಪಡೆಯಬೇಕು ಎಂದು ಕುಮಾರಸ್ವಾಮಿ ಸಾಕಷ್ಟು ಕಸರತ್ತು ನಡೆಸಿ ಚುನಾವಣೆ ಮಾಡಿದ್ದಾರೆ.
ಇನ್ನೂ ನಿಖಿಲ್ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಸಿಪಿ ಯೋಗೇಶ್ವರ್ ಸ್ಪರ್ಧೆ ಮಾಡಿದರು, ಬದಲಾದ ರಾಜಕೀಯ ರಂಗದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿವೈ ಕಣಕ್ಕಿಳಿದರು. ಇಲ್ಲಿ ಸಿಪಿ ಯೋಗೇಶ್ವರ್ ಗೆ ಗೆಲುವು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಡಿಕೆ ಬ್ರದರ್ಸ್ ಗೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಬೇಕು ಅಲ್ದೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸೋಲಿನ ಸಿಟ್ಟು ಡಿಕೆ ಬ್ರದರ್ಸ್ ಬಳಿ ಇರೋದ್ರಿಂದ ಅವರು ಸಹ ಕ್ಷೇತ್ರ ಗೆಲಲ್ಲೇಬೇಕು ಎಂದು ಹಲವು ಕಸರತ್ತು ನಡೆಸಿದ್ರು ಅಂತಿಮವಾಗಿ ನಾಳೆ ಈ ಕ್ಷೇತ್ರದ ಫಲಿತಾಂಶ ಪ್ರಕಟವಾಗಲಿದೆ ಮತದಾರ ಪ್ರಭು ಯಾರ ಕೈ ಹಿಡಿಯಲಿದ್ದಾನೆ ಕಾದು ನೋಡಬೇಕಿದೆ.
ಹಾಗೇ ಇನ್ನೊಂದು ಕ್ಷೇತ್ರ ಶಿಗ್ಗಾಂವಿ ಕ್ಷೇತ್ರ ಇಲ್ಲೂ ಸಹ ಮಾಜಿ ಸಿಎಂ ಹಾಲಿ ಸಂಸದರಾಗಿರುವ ಬಸವರಾಜ್ ಬೊಮ್ಮಾಯಿ ತಮ್ಮ ಪುತ್ರ ಭರತ್ ಬೊಮ್ಮಾಯಿ ಗೆಲ್ಲಿಸಬೇಕೆಂದು ಇನ್ನಿಲ್ಲದ ಕಸರತ್ತು ನಡೆಸಿ ತಮ್ಮ ಪುತ್ರನ ಪರ ಅಬ್ಬರದ ಪ್ರಚಾರ ಮಾಡಿದ್ದಾರೆ ಇನ್ನೂ ಇದೇ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸಿರ್ ಅಹಮದ್ ಖಾನ್ ಪಠಾಣ್ ಸ್ಪರ್ಧೆ ಮಾಡಿದ್ದರು ಮುಸ್ಲಿಂ ಮತಗಳ ಜೊತೆ ಕಾಂಗ್ರೆಸ್ ಆಡಳಿತದಲ್ಲಿರೋದ್ರಿಂದ ಭರತ್ ಬೊಮ್ಮಾಯಿಗೆ ಪ್ರಬಲ ಪೈಪೋಟಿ ನೀಡಿದ್ದಾರೆ ಪಠಾಣ್, ಕಳೆದ ಬಾರಿ ಬಸವರಾಜ್ ಬೊಮ್ಮಾಯಿಗೆ ನೀಡಿದ ಪೈಪೋಟಿಗಿಂತ ಈ ಬಾರಿ ಇನ್ನೂ ಹೆಚ್ಚಿನ ಪೈಪೋಟಿಯನ್ನ ಭರತ್ ಬೊಮ್ಮಾಯಿಗೆ ಪಠಾಣ್ ನೀಡಿದ್ದಾರೆ .ಅಂತಿಮವಾಗಿ ಮತದಾರ ಯಾರಿಗೆ ಜೈ ಎಂದಿದ್ದಾನೆ ಎಂಬುದು ನಾಳೆಯ ಫಲಿತಾಂಶದಲ್ಲಿ ತಿಳಿಯಲಿದೆ.
ಕೊನೆಯದಾಗಿ ಸಂಡೂರು ಕ್ಷೇತ್ರದಲ್ಲಿ ಬಿಜೆಪಿ - ಕಾಂಗ್ರೆಸ್ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿತ್ತು, ಸಂಸದ ತುಕಾರಾಂ ತಮ್ಮ ಪತ್ನಿ ಅನ್ನಪೂರ್ಣ ಅವರನ್ನೇ ಕಣಕ್ಕಿಳಿಸಿದ್ದರೆ ಬಿಜೆಪಿ ಬಂಗಾರು ಹನುಮಂತ ಅವರನ್ನು ಕಣಕ್ಕಿಳಿಸಿತ್ತು ಈ ಕ್ಷೇತ್ರದಲ್ಲಿ ಎರಡು ಪಕ್ಷಗಳು ಅಬ್ಬರದ ಪ್ರಚಾರ ನಡೆಸಿದೆ. ತುಕಾರಾಂ ಸ್ಪರ್ಧೆ ಮಾಡ್ತಿದ್ದ ಕ್ಷೇತ್ರವನ್ನ ಹೇಗಾದರು ಮಾಡಿ ಉಳಿಸಿಕೊಳ್ಳಬೇಕು ಎಂದು ತಮ್ಮ ಪತ್ನಿಯನ್ನೇ ನಿಲ್ಲಿಸಿ ಅಬ್ಬರದ ಪ್ರಚಾರ ಮಾಡಿದ್ದಾರೆ.
ಇನ್ನೂ ಬಂಗಾರು ಹನುಮಂತ ಪರವಾಗಿ ಜನಾರ್ದನ ರೆಡ್ಡಿಯೇ ಕಣಕ್ಕಿಳಿದು ಬಂಗಾರು ಪರ ಮತಯಾಚನೆ ನಡೆಸಿದ್ದಾರೆ. ಮೀಸಲು ಕ್ಷೇತ್ರವಾಗಿರುವುದರಿಂದ ವಾಲ್ಮೀಕಿ ನಿಗಮ ಹಗರಣವನ್ನ ರಾಜ್ಯ ಸರ್ಕಾರದ ಮಾಡಿದೆ ಎಂಬ ಅಸ್ತ್ರದೊಂದಿಗೆ ಕ್ಷೇತ್ರದಲ್ಲಿ ಬಿಜೆಪಿ ಹೆಚ್ಚಿನ ಪ್ರಚಾರ ನಡೆಸಿ ಮತಯಾಚನೆ ನಡೆಸಿದೆ. ವಾಲ್ಮೀಕಿ ನಿಗಮದ ಹಗರಣ ಯಾವುದೇ ಎಫೆಕ್ಟ್ ಆಗಲ್ಲ ಜನ ನಮ್ಮ ಪರವಾಗಿದ್ದಾರೆ ಎಂಬುದನ್ನ ತೊರಿಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲುವು ಅನಿವಾರ್ಯವಾಗಿದೆ.
ಇದರ ನಡುವೆ P - Marq ಎಂಬ ಸಂಸ್ಥೆಯ ಎಕ್ಸಿಟ್ ಪೋಲ್ ಪ್ರಕಾರ ರಾಜ್ಯದಲ್ಲಿ 2+1 ಫಲಿತಾಂಶ ಬರಲಿದೆ ಎಂದು ಹೇಳಿದೆ. ಅಂದ್ರೆ ಚನ್ನಪಟ್ಟಣ, ಶಿಗ್ಗಾಂವಿ ಎನ್ ಡಿಎ ಮೈತ್ರಿಕೂಟಕ್ಕೆ ಗೆಲುವು ಸಿಗಲಿದೆ, ಸಂಡೂರಿನಲ್ಲಿ ಕೈ ಪಕ್ಷಕ್ಕೆ ಜಯ ಸಿಗಲಿದೆ ಎಂದು ಹೇಳಿದೆ ಅಂತಿಮವಾಗಿ ನಾಳೆ ಈ ಎಲ್ಲಾ ಪ್ರಶ್ನೆಗಳಿಗೂ ನಿಖರ ಫಲಿತಾಂಶದೊಂದಿಗೆ ಉತ್ತರ ಸಿಗಲಿದೆ.
PublicNext
22/11/2024 07:40 pm