ಬೆಂಗಳೂರು : ಸಮಾಜದ ಶ್ರೇಯೋಭಿವೃದ್ಧಿಗಾಗಿ ಉದಾತ್ತ ಚಿಂತನೆಗಳಿಂದ ಜನ್ಮತಾಳಿರುವ ರಾಜ್ಯ ಒಕ್ಕಲಿಗರ ಸಂಘ ಇವತ್ತು ಗುಂಪುಗಾರಿಕೆಯಿಂದ ಸೊರಗುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಕೆಂಪೇಗೌಡ ವೈದ್ಯಕೀಯ ಮಹಾ ವಿದ್ಯಾಲಯಕ್ಕೆ ಕೇಂದ್ರ ವೈದ್ಯಕೀಯ ಮಂಡಳಿಯಿಂದ ಹೆಚ್ಚುವರಿಯಾಗಿ 100 ಯುಜಿ ಹಾಗೂ 68 ಪಿಜಿ ಸೀಟುಗಳ ಮಂಜೂರು ಮಾಡಿಸಿಕೊಡುವಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಕೇಂದ್ರದ ಆರೋಗ್ಯ ಸಚಿವ ಜೆಪಿ ನಡ್ಡಾ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕುಮಾರಸ್ವಾಮಿ, ಒಕ್ಕಲಿಗರ ಸಂಘ ಪ್ರತಿದಿನ ಗುಂಪುಗಾರಿಕೆ ಮೂಲಕ ಹೊರಗಡೆ ಸಂಘದ ಬಗ್ಗೆ ಜನ ಲಘುವಾಗಿ ಮಾತನಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ.
ಮೂರು ತಿಂಗಳು, ಆರು ತಿಂಗಳಿಗೆ ಒಮ್ಮೆ ಪದಾಧಿಕಾರಿಗಳನ್ನು ಬದಲಾವಣೆ ಮಾಡಿಕೊಂಡು ಗುಂಪುಗಾರಿಕೆ ನಡೆಸಿದರೆ ಸಂಘದ ಗತಿ ಏನು? ಒಕ್ಕಲಿಗ ಸಮಾಜದ ಮಕ್ಕಳ ಭವಿಷ್ಯದ ಪ್ರಶ್ನೆ ಏನು? ಎಂದು ಖಾರವಾಗಿ ಪ್ರಶ್ನಿಸಿದರು.
ಹಿಂದೆ ನಮ್ಮ ಒಕ್ಕಲು ಸಮಾಜದ ಪೂರ್ವಿಕರು ಸಂಘ ಕಟ್ಟಲು ಪಟ್ಟ ಶ್ರಮ ಏನು ಎಂಬುದನ್ನು ಈಗಿನ ಆಡಳಿತ ಮಂಡಳಿಯಲ್ಲಿರುವ 35 ಜನ ನಿರ್ದೇಶಕರು ಅರ್ಥ ಮಾಡಿಕೊಳ್ಳಬೇಕು. ಬೆಂದ ಮನೆಯಲ್ಲಿ ಗಳ ಇರಿಯುವಂತಹ ಜನರು ಕೂಡ ಸಂಘದಲ್ಲಿ ಸೇರಿಕೊಂಡಿದ್ದಾರೆ. ಸಂಘಕ್ಕೆ, ಒಕ್ಕಲಿಗ ಸಮಾಜಕ್ಕೆ ಕಿಂಚಿತ್ತು ಒಳ್ಳೆಯದು ಮಾಡಬೇಕು ಎಂಬ ಹಂಬಲ ಹೊಂದಿರುವ ಕೆಲವರು ಕೂಡ ಈ ಸಂಘದಲ್ಲಿ ಇದ್ದಾರೆ.
ಆದರೆ, ಸಂಘಕ್ಕೆ ಬಂದರೆ ಸಮಾಜಕ್ಕೆ ಒಳ್ಳೆಯದು ಮಾಡುವ ಬದಲು ಒಂದಷ್ಟು ಸಂಪಾದನೆ ಮಾಡಿಕೊಂಡು ಹೋಗೋಣ ಎಂದು ಸ್ವಾರ್ಥಿಗಳಾಗಿ ಆಲೋಚನೆ ಮಾಡುವ ವ್ಯಕ್ತಿಗಳಿಂದ ಸಮಾಜಕ್ಕೆ ಏನು ಉಪಯೋಗ ಎಂದು ಕೇಂದ್ರ ಸಚಿವರು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ನಗರದ ಹೃದಯ ಭಾಗದಲ್ಲಿ ಇಂತಹ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆ ಇದೆ, ರಾಜ್ಯದಲ್ಲಿಯೇ ಅತ್ಯಂತ ಉತ್ತಮ ಆಸ್ಪತ್ರೆ ಆಗಬೇಕಿತ್ತು. ಅಭಿವೃದ್ಧಿ ಆಗಿದೆ, ಆದರೆ ಅದು ಏನೇನಕ್ಕೂ ಸಾಲದು, ಗುಣಮಟ್ಟವೂ ಸಾಲದು. ಇಡೀ ರಾಜ್ಯದಲ್ಲಿಯೇ ನಂಬರ್ ಒನ್ ಆಸ್ಪತ್ರೆ ಆಗಬೇಕಿತ್ತು. ಆಗಲಿಲ್ಲ ಯಾಕೆ ಎಂಬುದನ್ನು ನಿರ್ದೇಶಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
PublicNext
22/11/2024 06:43 pm