ಮಂಡ್ಯ: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣಕ್ಕೆ ಸೇರಿದ ಗಣಂಗೂರು ಟೋಲ್ನಲ್ಲಿ ರಾಜಕೀಯ ಪುಡಾರಿಗಳು ಪುಂಡಾಟ ಮೆರೆದಿದ್ದು, ಟೋಲ್ ಹಣ ಕಟ್ಟದೇ ಸಿಬ್ಬಂದಿಯ ಮೇಲೆ ಧಿಮಾಕು ತೋರಿದ್ದಾರೆ.
ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ KA 06 M 8164 ನಂಬರ್ನ ಕಾರಿನಲ್ಲಿ ಹೊಗುತ್ತಿದ್ದ ಕಾಂಗ್ರೆಸ್ ಮುಖಂಡ ಗಣಂಗೂರು ಟೋಲ್ನಲ್ಲಿ ಹಣ ಕಟ್ಟಿಲ್ಲ. ಈ ವೇಳೆ ಟೋಲ್ ಸಿಬ್ಬಂದಿ ಕಾರು ತಡೆದು ಹಣ ಕೇಳಿದ್ದಕ್ಕೆ ಸಿಬ್ಬಂದಿ ಜೊತೆ ಜಗಳ ತೆಗೆದಿದ್ದಾನೆ. ನಿಂದನೆ ಮಾಡಿದ್ದಲ್ಲದೇ ಮಹಿಳಾ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ. ಈ ಘಟನೆ ಗಣಂಗೂರು ಟೋಲ್ನಲ್ಲಿ ಸಂಭವಿಸಿದ್ದು, ಹಲ್ಲೆಯ ದೃಶ್ಯ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಟೋಲ್ ಸಿಬ್ಬಂದಿ ಮತ್ತು ಕಾಂಗ್ರೆಸ್ ಮುಖಂಡನ ನಡುವೆ ವಾಗ್ವಾದ ನಡೆಯುತ್ತಿದ್ದ ಸಮಯದಲ್ಲಿ ಆತನ ಜೊತೆ ಬಂದಿದ್ದ ಮಹಿಳೆ ಕಾರಿನಿಂದ ಕೆಳಗಿಳಿದು ಬಂದು ಆಕೆಯೂ ಕೂಡ ಗಲಾಟೆ ಮಾಡಿದ್ದಾಳೆ. ಕೈ ಮುಖಂಡನ ಜೊತೆ ಕಾರಿನಲ್ಲಿದ್ದ ಮಹಿಳೆ ಟೋಲ್ನ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾಳೆ. ಸಿಬ್ಬಂದಿಯ ಜುಟ್ಟು ಹಿಡಿದು ಮಹಿಳೆ ಎಳೆದಾಡಿದ ಘಟನೆ ಕೂಡ ನಡೆದಿದೆ.
PublicNext
22/11/2024 10:47 pm