ಧಾರವಾಡ: ಬರುವ ಚಳಿಗಾಲದ ಅಧಿವೇಶನ ನಡೆದ ನಂತರ ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಬದಲಾವಣೆಯಾಗಲಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೊಸ ಬಾಂಬ್ ಸಿಡಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಅಭಿವೃದ್ಧಿಗೆ ಹಣವೇ ಬರುತ್ತಿಲ್ಲ ಎಂಬ ಮಾತನ್ನು ಕಾಂಗ್ರೆಸ್‌ನ ಹಿರಿಯ ಶಾಸಕರಾದ ರಾಜು ಕಾಗೆ ಸೇರಿದಂತೆ ಅನೇಕರು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೇ ಹೀಗೇ ಸರ್ಕಾರ ಮುಂದುವರೆದರೆ ಬರುವ ದಿನಗಳಲ್ಲಿ ನಾವು ಕಾಂಗ್ರೆಸ್ ತೊರೆಯಬೇಕಾಗುತ್ತದೆ ಎಂಬ ಮಾತನ್ನು ಕಾಂಗ್ರೆಸ್‌ನ ಅನೇಕ ಶಾಸಕರು ಹೇಳುತ್ತಿದ್ದಾರೆ. ಬರುವ ಚಳಿಗಾಲದ ಅಧಿವೇಶನ ಮುಗಿದ ಮೇಲೆ ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಪರಿವರ್ತನೆಯಾಗಲಿದೆ ಎಂದರು.
ಇಂದು ರಾಜ್ಯದಲ್ಲಿ 14 ಲಕ್ಷ ಪಡಿತರ ಚೀಟಿ ರದ್ದಾಗಿವೆ. ಈ ಬಗ್ಗೆ ಬಡವರು ಮತ್ತು ಬಿಜೆಪಿ ಪ್ರತಿಭಟನೆ ನಡೆಸಿದಾಗ ನಿನ್ನೆ ಸಚಿವ ಸಂಪುಟ ಸಭೆ ನಡೆಸಲಾಗಿದೆ. ಪಡಿತರ ಚೀಟಿಗಳನ್ನು ರದ್ದು ಮಾಡಿಲ್ಲ. ರದ್ಧತಿ ವಾಪಸ್ ಪಡೆಯುತ್ತೇವೆ ಎಂದು ಸಂಬಂಧಿಸಿದ ಸಚಿವರು ಹೇಳುತ್ತಾರೆ. ಈ ರೀತಿಯ ನಾಟಕವನ್ನು ಕಾಂಗ್ರೆಸ್ ಸರ್ಕಾರ ಕಳೆದ ಒಂದೂವರೆ ವರ್ಷದಿಂದ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/11/2024 07:35 pm