ಧಾರವಾಡ: ರೈತರ ಜಮೀನು ಹಾಗೂ ರಾಜ್ಯದ ಬೇರೆ ಬೇರೆ ಆಸ್ತಿಗಳು ವಕ್ಫಗೆ ಒಳಪಟ್ಟಿವೆ ಎಂದು ನಮೂದಾಗಿರುವುದನ್ನು ವಿರೋಧಿಸಿ ಧಾರವಾಡದಲ್ಲಿ ಬಿಜೆಪಿ ಕಾರ್ಯಕರ್ತರು ಒಂದು ದಿನದ ಧರಣಿ ನಡೆಸಿದರು.
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರ, ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಜಮೀನು ವಕ್ಫಗೆ ಒಳಪಟ್ಟಿವೆ ಎಂದು ಪಹಣಿಯಲ್ಲಿ ನಮೂದಾಗಿದೆ. ಅಷ್ಟೇ ಅಲ್ಲದೇ ರಾಜ್ಯದ ವಿವಿಧ ದೇವಸ್ಥಾನಗಳ ಆಸ್ತಿ ಕೂಡ ವಕ್ಫಗೆ ಒಳಪಟ್ಟಿವೆ ಎಂದು ನಮೂದು ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಪಾಕಿಸ್ತಾನ ಮಾಡಲು ಹೊರಟಿದೆ. ಸಚಿವ ಜಮೀರ್ ಅಹ್ಮದ್ ಅವರು ವಕ್ಫ ಅದಾಲತ್ ನಡೆಸುವ ಮೂಲಕ ಲ್ಯಾಂಡ್ ಜಿಹಾದ್ ನಡೆಸುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರ ಜಮೀನು, ಹಿಂದೂ ದೇವಾಲಯಗಳ ಆಸ್ತಿ ಕಬಳಿಸುವ ಮೂಲಕ ರೈತನ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ. ಹಿಂದೂ ದೇವಾಲಯಗಳೂ ವಕ್ಫಗೆ ಒಳಪಟ್ಟಿವೆ ಎನ್ನುವ ಮೂಲಕ ಹಿಂದೂ ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ಪಡಿತರ ಚೀಟಿಗಳನ್ನು ರದ್ದು ಮಾಡುವ ಮೂಲಕ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ದಬ್ಬಾಳಿಕೆ ಇದೇ ರೀತಿ ಮುಂದುವರೆದಿದ್ದೇ ಆದಲ್ಲಿ ಆ ಪಕ್ಷದ ರಾಜಕೀಯ ಕೊನೆಯ ದಿನಗಳ ಹತ್ತಿರ ಬರುತ್ತವೆ. ಸಚಿವ ಜಮೀರ್ ಅಹ್ಮದ್ ಅವರನ್ನು ಕೂಡಲೇ ಸಂಪುಟದಿಂದ ಕೈ ಬಿಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು. ಮಾಜಿ ಶಾಸಕಿ ಸೀಮಾ ಮಸೂತಿ, ಆಹಾರ ಮತ್ತು ನಾಗರಿಕ ಸರಬರಾಜಿ ನಿಗಮದ ಮಾಜಿ ನಿರ್ದೇಶಕ ಶರಣು ಅಂಗಡಿ, ಬಿಜೆಪಿ ಮುಖಂಡರಾದ ಪಿ.ಎಚ್.ನೀರಲಕೇರಿ, ಮೋಹನ ರಾಮದುರ್ಗ, ಶ್ರೀನಿವಾಸ ಕೋಟ್ಯಾನ ಸೇರಿದಂತೆ ಅನೇಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.
Kshetra Samachara
22/11/2024 01:43 pm