ಮಂಗಳೂರು: ದೇಶದಲ್ಲಿ ಕಳೆದ 75ವರ್ಷಗಳಲ್ಲಿ ಕಾಂಗ್ರೆಸ್ ಆಡಳಿತ ಮಾಡಿದಂತಹ ಕಾಲದಲ್ಲಿ ಅಲ್ಲಾನೂ ಮೆಚ್ಚದಂತಹ ಕಾರ್ಯವನ್ನು ಮಾಡುತ್ತಾ ಬಂದಿದೆ ಎಂದು ದ.ಕ.ಜಿಲ್ಲಾ ಸಂಸದ ಬ್ರಿಜೇಶ್ ಚೌಟ ಆಕ್ರೋಶ ವ್ಯಕ್ತಪಡಿಸಿದರು.
ವಕ್ಫ್ ಅಕ್ರಮದ ವಿರುದ್ಧ ದ.ಕ.ಜಿಲ್ಲಾ ಬಿಜೆಪಿಯಿಂದ 'ನಮ್ಮ ಭೂಮಿ ನಮ್ಮ ಹಕ್ಕು' ಎಂಬ ಪರಿಕಲ್ಪನೆಯಡಿ ನಗರದ ಮಿನಿ ವಿಧಾನಸೌಧದ ಮುಂಭಾಗದ ರಾಜಾಜಿ ಪಾರ್ಕ್‌ನಲ್ಲಿ ಶುಕ್ರವಾರ ದಿನವಿಡೀ ನಡೆಯುತ್ತಿರುವ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೇಶದಲ್ಲಿ ಯಾವಾಗೆಲ್ಲಾ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತೋ ಆವಾಗೆಲ್ಲಾ ವಕ್ಫ್ ಕಾನೂನಿಗೆ ಬಲವನ್ನು ಕೊಡುವ ಕೆಲಸವನ್ನು ಮಾಡುತ್ತಾ ಬಂದಿದೆ. ಒಂದರ್ಥದಲ್ಲಿ ಲ್ಯಾಂಡ್ ಜಿಹಾದ್ ಮಾಡಲು ಯಾರಾದರೂ ಪ್ರೇರಣೆ ಕೊಟ್ಟಿದ್ದರೆ ಅದು ಕಾಂಗ್ರೆಸ್ ಪಕ್ಷದ ಸರಕಾರ. ಮಂಗಳೂರು ತಾಲೂಕು ಒಂದರಲ್ಲಿಯೇ 2000 - 2004ರೊಳಗೆ 35ಪ್ರಾಪರ್ಟಿಗಳು ವಕ್ಫ್ ಭೂಮಿಯಾಗಿ ಪರಿವರ್ತನೆಯಾಗಿದೆ. ಇದರಲ್ಲಿ 50%ಕ್ಕಿಂತ ಹೆಚ್ಚಿನ ಭೂಮಿಗಳು ಸರಕಾರಿ ಜಾಗಗಳು ಅಥವಾ ವಕ್ಫ್ ಬೈ ಯೂಸರ್‌ನಿಂದ ಬಂದವುಗಳಾಗಿದೆ.
ಇಸ್ಲಾಂನ ಬಡವರು, ಮಹಿಳೆಯರ ಶಿಕ್ಷಣ, ಆರೋಗ್ಯಕ್ಕಾಗಿ ಓರ್ವ ಮುಸ್ಲಿಮನೊಬ್ಬ ತನ್ನ ಭೂಮಿಯನ್ನು ವಕ್ಫ್‌ಗಾಗಿ ಕೊಟ್ಟದ್ದು ಮಾತ್ರವೇ ವಕ್ಪ್ ಆಸ್ತಿಯಾಗಿರುತ್ತದೆ ಎಂಬುದು ವಕ್ಫ್‌ನ ಮೂಲ ಸಿದ್ಧಾಂತ ಎಂದರು.
ಈ ಪ್ರತಿಭಟನೆಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮನಪಾ ಸದಸ್ಯರು, ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು. ಭಜನೆ ಮಾಡುವ ಮೂಲಕ ಪ್ರತಿಭಟನೆಗೆ ನಾಂದಿ ಹಾಡಲಾಯಿತು. ಈ ಭಜನೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ತಬಲ ನುಡಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಅಲ್ಪಸಂಖ್ಯಾತ ಓಲೈಕೆಗಾಗಿ ರೈತರ ಬದುಕಿಗೆ ಕೊಳ್ಳಿಯಿಟ್ಟ ಸಿದ್ಧರಾಮಯ್ಯಗೆ ದಿಕ್ಕಾರ, ಕಾಂಗ್ರೆಸ್ ಸರಕಾರದ ಲ್ಯಾಂಡ್ ಜಿಹಾದ್, ದೇವಸ್ಥಾನ, ಮಠಗಳ ಜಾಗ ಅತಿಕ್ರಮಣ ಕಾಂಗ್ರೆಸ್ ಹುನ್ನಾರಕ್ಕೆ ಧಿಕ್ಕಾರ ಎಂಬ ಸ್ಲೋಗನ್‌ಗಳಿರುವ ಫ್ಲೆಕ್ಸ್, ಕಾರ್ಡ್‌ಗಳು ಪ್ರತಿಭಟನೆಯಲ್ಲಿ ಕಂಡು ಬಂದವು.
PublicNext
22/11/2024 04:39 pm