ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಪ್ರಿಯದರ್ಶಿನಿ ಟ್ರಸ್ಟ್ ಹೆಸರಲ್ಲಿ ಸರಕಾರಿ ಆಸ್ಪತ್ರೆಯ ಜಾಗ ಕಬಳಿಕೆ ಯತ್ನ - ಸಿಎಂ, ಶಾಸಕರ ವಿರುದ್ಧ ಆರೋಪ

ಪುತ್ತೂರು : ಆರೋಗ್ಯ ಇಲಾಖೆಗೆ ಒಳಪಟ್ಟಿರುವ ಪುತ್ತೂರು ತಾಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಮಂಜೂರಾದ ಜಾಗವನ್ನು ರದ್ದುಗೊಳಿಸಿ, ಪ್ರಿಯದರ್ಶಿನಿ ಟ್ರಸ್ಟ್ ಹೆಸರಿನಲ್ಲಿನ ಟ್ರಸ್ಟ್‌ಗೆ ನೀಡುವ ಪ್ರಯತ್ನವೊಂದು ಪುತ್ತೂರಿನಲ್ಲಿ ನಡೆಯುತ್ತಿದೆ. ಇಲ್ಲಿನ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಮುಖ್ಯಮಂತ್ರಿ ಸಹಕಾರದಿಂದಲೇ ಈ ಭೂ ಕಬಳಿಕೆ ಪ್ರಯತ್ನ ನಡೆಯುತ್ತಿದೆ ಎಂದು ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.

ಪುತ್ತೂರು ಪ್ರೆಸ್‌ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ದಾಖಲೆ ಗಳನ್ನು ಪ್ರದರ್ಶಿಸಿ ಮಾತನಾಡಿದ ಅವರು, ಜಮೀನು ಮಂಜೂರಾತಿ ಪ್ರಕ್ರಿಯೆ ತಹಶೀಲ್ದಾರ್ ಹಂತದಲ್ಲಿದ್ದು ಈಗಲೇ ಅದನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ದ.ಕ.ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರು, ಸಂಸದರು, ಮುಖಂಡರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಶಾಸಕ ಅಶೋಕ್‌ ರೈ ಅಧ್ಯಕ್ಷರಾಗಿರುವ ಟ್ರಸ್ಟ್ ಇದಾಗಿದ್ದು, ಅದರ ಲೆಟರ್ ಹೆಡ್ ನಲ್ಲಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ. ಮನವಿಯಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಕಾಯ್ದಿರಿಸಿದ 0.80 ಜಮೀನು ರದ್ದುಗೊಳಿಸಿ, ರದ್ದುಪಡಿಸಿದ 0.30 ಎಕರೆ ಜಾಗವನ್ನು ಟ್ರಸ್ಟ್‌ಗೆ ನೀಡುವಂತೆ ಉಲ್ಲೇಖಿಸಲಾಗಿದೆ. ಜಮೀನು ನೀಡಲು ಕ್ರಮ ಕೈಗೊಳ್ಳುವಂತೆ ಜು.16 ರಂದು ಮುಖ್ಯಮಂತ್ರಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿ ವರದಿ ಮಂಡಿಸುವಂತೆ ಸೂಚಿಸಿದ್ದಾರೆ. ಇನ್ನೊಂದೆಡೆ ಸಿಎಂ ಕಚೇರಿಯಿಂದಲೂ ಒಂದು ಪ್ರತಿಯನ್ನು ಎಸಿಎಸ್‌ಗೆ ಕಳುಹಿಸಿದ್ದು, ಅಲ್ಲಿಂದ ಜಿಲ್ಲಾಧಿಕಾರಿಗೂ ಜಿಲ್ಲಾಧಿಕಾರಿಯಿಂದ ತಹಶೀಲ್ದಾರ್‌ಗೂ ಬಂದಿದೆ. ಅಲ್ಲಿಗೆ ಬಂದ ಪತ್ರದಲ್ಲಿ 0.30 ಎಕರೆಯನ್ನು 0.10 ಎಕರೆಗೆ ಇಳಿಸಲಾಗಿತ್ತು. ತಹಶೀಲ್ದಾರ್ ಪತ್ರಿಕಾ ಪ್ರಕಟನೆಗಾಗಿ ನಗರಸಭೆ, ಆರೋಗ್ಯ ಇಲಾಖೆಗೆ ಪತ್ರ ಕಳುಹಿಸಿದ್ದು ಈ ಪತ್ರಿಕಾ ಪ್ರಕಟನೆಯಿಂದಲೇ ಭೂ ಕಬಳಿಕೆಯ ವಿಚಾರ ಬೆಳಕಿಗೆ ಬಂದಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾ ನಂದ ಶೆಟ್ಟಿ ನಗರ ಮಂಡಲ ಅಧ್ಯಕ್ಷ ಪಿ.ಬಿ.ಶಿವಕುಮಾ‌ರ್, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ನಗರಸಭೆ ಸ್ಥಾಯಿ ಸಮಿತಿ " ಅಧ್ಯಕ್ಷ ಸುಂದರ ಪೂಜಾರಿ ಬಡಾವು ಉಪಸ್ಥಿತರಿದ್ದರು.

ಟ್ರಸ್ಟ್‌ ಮನವಿ ಮಾಡಿದ್ದು ನಿಜ: ಶಾಸಕ ಅಶೋಕ್ ರೈ ಜಮೀನು ಕಬಳಿಕೆ ಆರೋಪದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಅಶೋಕ್ ಕುಮಾರ್ ರೈ, ಸರಕಾರಿ ಆಸ್ಪತ್ರೆಯ ಬಳಿ ಖಾಲಿ ಇರುವ 80 ಸೆಂಟ್ಸ್ ಜಾಗದಲ್ಲಿ 10 ಸೆಂಟ್ಸ್ ಜಾಗವನ್ನು ಪ್ರಿಯದರ್ಶಿನಿ ಟ್ರಸ್ಟ್ ಸಂಸ್ಥೆಯು ತಮಗೆ ಮಂಜೂರು ಮಾಡಿಸಿಕೊಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ತಾನು ಟ್ರಸ್ಟ್ ಪರವಾಗಿ ಪತ್ರವನ್ನು ನೀಡಿದ್ದು ನಿಜ. ಆದರೆ ಬಳಿಕ ಅದನ್ನು ರದ್ದುಗೊಳಿಸಲಾಗಿದೆ.

ನನ್ನ ಪ್ರಸ್ತಾವವು ವಿವಿಧ ಇಲಾಖೆಗಳಿಗೆ ನಿರಪೇಕ್ಷಣಾ ಪತ್ರಕ್ಕಾಗಿ ಕಳುಹಿಸಲ್ಪಟ್ಟಿದ್ದು, ಕಾನೂನು ಪ್ರಕಾರ ಈ ಜಾಗ ಮಂಜೂರಾತಿಗೆ ಸಾಧ್ಯ ವಿಲ್ಲ ಎಂಬ ಕಾರಣಕ್ಕೆ ಪ್ರಸ್ತಾವವನ್ನು ರದ್ದು ಮಾಡುವಂತೆ ಸೂಚನೆ ನೀಡಿದ್ದೇನೆ. ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಮೀಸಲಾದ ಜಾಗವನ್ನು ಯಾವುದೇ ಕಾರಣಕ್ಕೂ ಟ್ರಸ್ಟ್‌ಗೆ ನೀಡಲು ಸಾಧ್ಯವಿಲ್ಲ ಎಂದು ಟ್ರಸ್ಟ್ ಪ್ರಮುಖರಿಗೆ ತಿಳಿಸಿದ್ದೆ ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಶಾಸಕ ಅಶೋಕ್ ರೈ ಪ್ರತಿಕ್ರಿಯೆ ನೀಡಿದ್ದಾರೆ.

Edited By : PublicNext Desk
PublicNext

PublicNext

22/11/2024 02:14 pm

Cinque Terre

8.17 K

Cinque Terre

2

ಸಂಬಂಧಿತ ಸುದ್ದಿ