ಹುಬ್ಬಳ್ಳಿ: ಬಸ್ಸಿನಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಲಕ್ಷಾಂತರ ಮೌಲ್ಯದ ಚಿನ್ನ-ಬೆಳ್ಳಿ ಒಡವೆ ಬ್ಯಾಗನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಹಾಗೂ ನಿರ್ವಾಹಕರು ಪ್ರಾಮಾಣಿಕತೆ ಮೆರೆದಿದ್ದು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಭಟ್ಟೂರು ನಿವಾಸಿ ಮಹಾದೇವಿ ಜಗದೀಶ ಯಳವತ್ತಿ ಎಂಬುವರು ಮಂಗಳವಾರ ಮಧ್ಯಾಹ್ನ ತಮ್ಮ ಮಗುವಿನೊಂದಿಗೆ ಹುಬ್ಬಳ್ಳಿ ಗ್ರಾಮಾಂತರ 1ನೇ ಡಿಪೊ ಕೆ.ಎ 42 ಎಫ್ 590 ಬಸ್ಸಿನಲ್ಲಿ ಹುಬ್ಬಳ್ಳಿಯಿಂದ ಗುಂಜಳಕ್ಕೆ ಪ್ರಯಾಣ ಮಾಡಿದ್ದಾರೆ. ತಮ್ಮ ಊರಿನ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಚಿನ್ನ,ಬೆಳ್ಳಿಯ ಒಡವೆಗಳು ಹಾಗೂ ನಗದು ಹಣವಿದ್ದ ಬ್ಯಾಗನ್ನು ಬಸ್ಸಿನಲ್ಲಿಯೇ ಮರೆತು ಹೋಗಿದ್ದಾರೆ.
ಪ್ರಯಾಣಿಕರೆಲ್ಲ ಇಳಿದ ನಂತರ ಬಸ್ಸಿನ ನಿರ್ವಾಹಕ ಎಂ.ವಿ.ಹಿರೇಮಠ ಹಾಗೂ ಚಾಲಕರಾದ ಎಂ.ಎಚ್. ಪೀರಖಾನ್ ರವರು ಬ್ಯಾಗನ್ನು ಗಮನಿಸಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಘಟಕದಲ್ಲಿ ಮೇಲಾಧಿಕಾರಿಗಳ ಸಮಕ್ಷಮದಲ್ಲಿ ಬ್ಯಾಗು ತೆಗೆದು ನೋಡಲಾಗಿ ಅದರಲ್ಲಿ ಚಿನ್ನ-ಬೆಳ್ಳಿ ಒಡವೆಗಳಾದ ಕಿವಿಯೋಲೆ, ಲಕ್ಷ್ಮೀ ತಾಳಿ, 8 ತಾಳಿ ಗುಂಡುಗಳು, ಉಂಗುರ, ಬುಗುಡಿ,ನೋಜರಿಂಗ್ ಮತ್ತು ಮಗುವಿನ ಕೈ ಖಡಗ, ಚೈನ್,ಹಾಲ ಗಡಗ, ಉಂಗುರ ಹಾಗೂ ರೂ.220ನಗದು ಹಣವಿರುವುದು ಗೊತ್ತಾಗಿದೆ. ಬ್ಯಾಗನಲ್ಲಿದ್ದ ಆಧಾರ್ ಕಾರ್ಡ್ ನಲ್ಲಿರುವ ದೂರವಾಣಿ ಸಂಖ್ಯೆಯ ಮೂಲಕ ವಾರಸುದಾರರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ನಿರ್ವಾಹಕರ ಮೂಲಕ ಬ್ಯಾಗನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.
ಒಡವೆ, ಹಣದ ಬ್ಯಾಗ ಮರಳಿ ಪಡೆದ ಪ್ರಯಾಣಿಕರಾದ ಮಹಾದೇವಿ ಹಾಗೂ ಅವರ ಪತಿ ಜಗದೀಶ ಭಾವುಕರಾಗಿ ಮಾತನಾಡಿ, ಮಗುವಿನೊಂದಿಗೆ ಮನೆಗೆ ಹೋಗುವ ಗಡಿಬಿಡಿಯಲ್ಲಿ ಬಸ್ಸಿನಲ್ಲಿ ಬ್ಯಾಗ ಬಿಟ್ಟು ಬಂದಿದ್ದು ನೆನಪಿರಲಿಲ್ಲ. ಆಯಾಸವಾಗಿದ್ದರಿಂದ ವಿಶ್ರಾಂತಿ ಪಡೆಯುತ್ತಿದ್ದೆ. ಸಾರಿಗೆ ಡಿಪೊ ಸಿಬ್ಬಂದಿಯಿಂದ ದೂರವಾಣಿ ಕರೆ ಬಂದಾಗ ತಮಾಷೆಯ ಕರೆ ಎಂದು ಸುಮ್ಮನಾಗಿದ್ದೆ.
ನಂತರ ಮನೆಯಲ್ಲಿ ಹುಡುಕಾಡಿದಾಗ ಬ್ಯಾಗ್ ಬಿಟ್ಟು ಬಂದುರುವುದು ಗೊತ್ತಾಗಿ ತುಂಬಾ ಗಾಬರಿಯಾಗಿತ್ತು. ಮತ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಕರೆ ಮಾಡಿ ಬ್ಯಾಗ ನನ್ನದೇ ಎಂದು ಖಚಿತಪಡಿಸಿದೆ. ಅಂದಾಜು ರೂ. 1ಲಕ್ಷ 50 ಸಾವಿರಕ್ಕೂ ಹೆಚ್ಚಿನ ಮೌಲ್ಯದ ಎಲ್ಲಾ ಒಡವೆಗಳು ಹಾಗೂ ಹಣದ ಸಹಿತ ಬ್ಯಾಗನ್ನು ಸುರಕ್ಷಿತವಾಗಿ ಹಿಂದಿರುಗಿಸಿದ ಚಾಲಕರು, ನಿರ್ವಾಹಕರು ಹಾಗೂ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಎಷ್ಟು ಕೃತಜ್ಞತೆ ಹೇಳಿದರು ಸಾಲದು ಎಂದು ಭಾವುಕರಾದರು.
ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿ ಪ್ರಾಮಾಣಿಕತ ಮೆರೆದ ನಿರ್ವಾಹಕರಾದ ಎಂ.ವಿ.ಹಿರೇಮಠ ಹಾಗೂ ಎಂ.ಎಚ್.ಪೀರಖಾನ್ ಅವರ ಕರ್ತವ್ಯ ಪರತೆ ಸಾರ್ವಜನಿಕ ವಲಯದಲ್ಲಿ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಹೆಚ್ಚಿಸಿದೆ ಹಾಗೂ ಇತರೆ ನೌಕರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದ್ದಾರೆ.
Kshetra Samachara
22/11/2024 03:41 pm