ಬೆಳಗಾವಿ: ಅಬ್ಬಾ ಎಂಥಾ ಕಾಲ ಬಂತು ನೋಡಿ, ಅನಾಥರೆಂದು ಸಾಕಿ ಸಲುಹಿದ ಮಕ್ಕಳೇ ಕೈಯಲ್ಲಿ ಬಂದೂಕು, ಕೊಡ್ಲಿ ಹಿಡಿದು ಪೋಷಕರ ಮೇಲೆ ಹಲ್ಲೆ ಮಾಡಿ ದರ್ಪ ತೋರಿದ್ದಾರೆ. ನಮಗೆ ನ್ಯಾಯ ಕೊಡಿ ಎಂದು ವೃದ್ಧ ದಂಪತಿ ಅಂಗಲಾಚುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬಡಿಗವಾಡ ಗ್ರಾಮದ ವೃದ್ಧ ದಂಪತಿ ಲಕ್ಕಪ್ಪ ಪಾವಡಿ, ಮಲ್ಲಪ್ಪ ಪಾವಡಿಗೆ ಮಕ್ಕಳು ಇಲ್ಲ. ಸಂಬಂಧಿಕರಲ್ಲಿ ಮೂರು ಜನ ಮಕ್ಕಳು ಬಾಲ್ಯದಲ್ಲೇ ತಂದೆ-ತಾಯಿಯನ್ನು
ಕಳೆದುಕೊಳ್ಳುತ್ತಾರೆ. ಅದೇ ವೇಳೆ ನಮಗೂ ಮಕ್ಕಳಿಲ್ಲ ಎಂದು ಲಕ್ಕಪ್ಪ ಪಾವಡಿ, ಮಲ್ಲಪ್ಪ ಪಾವಡಿಗೆ ದಂಪತಿ ಸಾಕಿ ಸಲುಹಿದ್ದಾರೆ. ಈ ಮೂರು ಜನ ಮಕ್ಕಳಲ್ಲಿ ಸಂಜು ಮಾಯಾಪುರೆ ಎಂಬಾತ ವೃದ್ಧ ದಂಪತಿಯ ಒಂದು
ಎಕರೆ ಜಮೀನು ಕಬಳಿಸಲು ಹುನ್ನಾರ ನಡೆಸಿದ್ದಾನೆ ಎನ್ನಲಾಗಿದೆ. ವೃದ್ಧ ದಂಪತಿ ಅನಕ್ಷರಸ್ಥರಿರುವುದನ್ನೇ ಬಂಡವಾಳ ಮಾಡಿಕೊಂಡು ಮೋಸ ಮಾಡಿ ಒಂದು ಎಕರೆ ಜಮೀನು ತನ್ನ ಹೆಸರಿಗೆ ಬರೆಯಿಸಿಕೊಂಡು ಬೆದರಿಕೆ ಹಾಕಿರುವ ಆರೋಪವನ್ನು ಸಂಜು ಮಾಯಪ್ಪ ರಾಜಾಪುರೆ ವಿರುದ್ಧ ವೃದ್ಧ ದಂಪತಿ ಮಾಡಿದ್ದಾರೆ.
ವೃದ್ಧ ದಂಪತಿಯ ಒಂದು ಎಕರೆ ಜಮೀನು ಕಬಳಿಸಿದಲ್ಲದೇ ವೃದ್ಧ ದಂಪತಿಯನ್ನೇ ಮನೆಯಿಂದ ಹೊರಗೆ ಹಾಕಿದ್ದಾರಂತೆ. ದಂಪತಿಯನ್ನೇ ಹೊಡೆಯಲು ಮುಂದಾಗಿದ್ದಾರೆ. ಕೈಯಲ್ಲಿ ಬಂದೂಕು, ಕೊಡ್ಲಿ ಹಿಡಿದು ಹಲ್ಲೆಗೆ ಯತ್ನಿಸಿದ ವಿಡಿಯೋ ವೈರಲ್ ಆಗಿದೆ. ಹೀಗೆ ಕೈಯಲ್ಲಿ ಬಂದೂಕು ಗನ್ ಹಿಡಿದು ಹಲ್ಲೆಗೆ ಯತ್ನಿಸುತ್ತಿರುವ ಘಟನೆ ಕಳೆದ ತಿಂಗಳು ನಡೆದಿದೆ ಎನ್ನಲಾಗಿದ್ದು, ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈಗಾಗಲೇ ವೃದ್ಧ ದಂಪತಿ ಪರ ವಕೀಲರು ಒಂದು ಎಕರೆ ಜಮೀನು ವಾಪಾಸ್ ಪಡೆಯಲು ಕೋರ್ಟ್ ಮೆಟ್ಟಿಲೇರಿದ್ದಾರೆ.
ಒಟ್ಟಿನಲ್ಲಿ ಈ ಘಟನೆ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ನಮಗೆ ನ್ಯಾಯ ಬೇಕು ಎಂದು ಈ ವೃದ್ಧ ದಂಪತಿ ಜಿಲ್ಲಾಧಿಕಾರಿಗಳ ಕಚೇರಿ ಮೆಟ್ಟಿಲೇರಿದ್ದಾರೆ.
Kshetra Samachara
21/11/2024 01:15 pm