ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದ ದಟ್ಟ ಕಾನನದಲ್ಲಿ ಮತ್ತೆ ಕೆಂಪು ಉಗ್ರರ ಹೆಜ್ಜೆ ಗುರುತುಗಳು ಸದ್ದು ಮಾಡತೊಡಗಿವೆ.
ಶೃಂಗೇರಿ ತಾಲೂಕಿನ ಕಾಡಂಚಿನ ಕುಗ್ರಾಮಕ್ಕೆ ಭೇಟಿ ನೀಡಿದ್ದ ನಕ್ಸಲರ ತಂಡ ಮನೆಯೊಂದರಲ್ಲಿ ಊಟ ಮಾಡಿ, ಮಾತನಾಡಿಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ, ಎ.ಎನ್.ಎಫ್. ಹಾಗೂ ಪೊಲೀಸರು ಕೊಪ್ಪ ತಾಲೂಕಿನ ಎಡಗುಂದದ ಇಬ್ಬರು ಯುವಕರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದು ಅನುಮಾನಕ್ಕೆ ಪುಷ್ಠಿ ಸಿಕ್ಕಂತಾಗಿದೆ. ಕಳೆದ ವಾರ ಶೃಂಗೇರಿಯ ಕುಗ್ರಾಮಕ್ಕೆ 6 ಜನ ಅಪರಿಚಿತರು ಬಂದು ಹೋಗಿದ್ದರು ಎಂಬ ಮಾಹಿತಿ ಹಿನ್ನೆಲೆ ನಕ್ಸಲ್ ನಿಗ್ರಹ ಪಡೆ ಹೈ ಅಲರ್ಟ್ ಘೋಷಿಸಿತ್ತು. ಅದರ ಬೆನ್ನಲ್ಲೇ ಇಬ್ಬರು ಸಿಂಪಥೈಸರ್ ಬಂಧನವಾಗ್ತಿದ್ದಂತೆ ಡಾಗ್ ಸ್ಕ್ವಾಡ್ ಜೊತೆ ಎ.ಎನ್.ಎಫ್. ಸಿಬ್ಬಂದಿ ಕಾಡಲ್ಲಿ ನಕ್ಸಲರ ಪತ್ತೆಗಾಗಿ ಕಾರ್ಯಚರಣೆ ನಡೆಸುತ್ತಿದ್ದಾರೆ.
ಶೃಂಗೇರಿ, ಕೊಪ್ಪ ಹಾಗೂ ಕಳಸ ತಾಲೂಕಿನಲ್ಲಿ ವ್ಯಾಪಿಸಿಕೊಂಡಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಎ.ಎನ್.ಎಫ್. ಸಿಬ್ಬಂದಿ ಫುಲ್ ಅಲರ್ಟ್ ಆಗಿದ್ದಾರೆ. ಮಲೆನಾಡಲ್ಲಿ ನಕ್ಸಲ್ ಚಟುವಟಿಕೆಯ ಸುದ್ದಿ ಹೆಚ್ಚಾಗ್ತಿದ್ದಂತೆ ನಕ್ಸಲ್ ನಿಗ್ರಹ ಪಡೆ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ, ಚಿಕ್ಕಮಗಳೂರು ಎಸ್‌ಪಿ ವಿಕ್ರಂ ಅಮಟೆ ಹಾಗೂ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
PublicNext
12/11/2024 08:52 pm