ಬೆಂಗಳೂರು : ಕಳ್ಳತನ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ಆರೋಪಿ ಫಹೀಮ್ ಅಲಿಯಾಸ್ ಎಟಿಎಂನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಆತನ ಸ್ಥಳೀಯ ನಿವಾಸವನ್ನೂ ಸಹ ಬುಲ್ಡೋಜರ್ ಬಳಸಿ ನೆಲಸಮ ಮಾಡಲಾಗಿದೆ. ಕಳ್ಳತನ, ದರೋಡೆ ಗ್ಯಾಂಗ್ನ ಮಾಸ್ಟರ್ ಮೈಂಡ್ ಆಗಿದ್ದ ಫಹೀಮ್ ಗ್ಯಾಂಗ್ನ ಇಬ್ಬರನ್ನು ಕಳೆದ ತಿಂಗಳು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿತ್ತು.
ಆರೋಪಿ ಫಹೀಮ್ ಬೆಂಗಳೂರು, ಉತ್ತರ ಪ್ರದೇಶ ಸೇರಿದಂತೆ ವಿವಿಧೆಡೆ ಕಳ್ಳತನ, ದರೋಡೆ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಆತನಿಗಾಗಿ ಬೆಂಗಳೂರು ಪೊಲೀಸರು ಮಾತ್ರವಲ್ಲದೆ, ವಿವಿಧ ರಾಜ್ಯಗಳ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.ಈ ಹಿಂದೆ ಅಪರಾಧ ಪ್ರರಕಣದಲ್ಲಿ ಜೈಲು ಸೇರಿದ್ದ ಫಹೀಮ್ ಪೆರೋಲ್ ಮೇಲೆ ಹೊರಬಂದಿದ್ದ. ಪೆರೋಲ್ ಮೇಲೆ ಹೊರಗಿದ್ದಾಗಲೇ ಮತ್ತಷ್ಟು ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿದ್ದ.
ಏಪ್ರಿಲ್ 24 ರಂದು ಫಹೀಮ್ ಗ್ಯಾಂಗ್ ಮುಸುಕುಧಾರಿಗಳಾಗಿ ಬಂದು ಸಹಕಾರನಗರದಲ್ಲಿರುವ ವೈದ್ಯ ಡಾ.ಉಮಾಶಂಕರ್ ಮನೆಗೆ ನುಗ್ಗಿ 40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿತ್ತು. ಈ ಪ್ರಕರಣದಲ್ಲಿ ಫಹೀಮ್ ಎ1 ಆರೋಪಿಯಾಗಿದ್ದ. ಘಟನೆ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಬಳಿಕ ಈತನ ಬಂಧನಕ್ಕೆ ಕೊಡಿಗೆಹಳ್ಳಿ ಪೊಲೀಸರು ಬಲೆ ಬೀಸಿದ್ದರು.
ಘಟನೆ ಸಂಬಂಧ ಮೂವರನ್ನು ಈಗಾಗಲೇ ಬಂಧಿಸಿದ್ದರು. ಆದರೆ, ಫಹೀಮ್ ಮಾತ್ರ ಬೆಂಗಳೂರು ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡಿದ್ದ. ಸದ್ಯ ಉತ್ತರ ಪ್ರದೇಶದ ಮುರ್ದಾಬಾದ್ ಪೊಲೀಸರು ಫಹೀಮ್ನನ್ನು ಬಂಧಿಸಿದ್ದಾರೆ. ಆತನ ಮನೆಯನ್ನೂ ನೆಲಸಮಗೊಳಿಸಿದ್ದಾರೆ. ಆರೋಪಿಯ ಬಂಧನದಿಂದ ದೇಶಾದ್ಯಂತ 65 ಪ್ರಕರಣಗಳ ತನಿಖೆ ಚುರುಕುಗೊಳ್ಳಲಿವೆ. ಸದ್ಯ ಫಹೀಮ್ನನ್ನು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆಯಲು ಕೊಡಿಗೇಹಳ್ಳಿ ಪೊಲೀಸರು ಮುಂದಾಗಿದ್ದಾರೆ.
PublicNext
12/11/2024 08:20 pm