ಉಡುಪಿ: ಅಬಕಾರಿ ಇಲಾಖೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ರಾಜ್ಯ ವೈನ್ ಮರ್ಚೆಂಟ್ ಅಸೋಸಿಯೇಷನ್ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ.
ಮಹಾರಾಷ್ಟ್ರ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಕರ್ನಾಟಕದ ಮದ್ಯ ಮಾರಾಟಗಾರರಿಂದ 700 ಕೋಟಿ ಲೂಟಿ ಹೊಡೆದಿದೆ ಎಂಬ ಆರೋಪದ ಕುರಿತು ರಾಜ್ಯ ವೈನ್ ಮರ್ಚೆಂಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದು, ಚುನಾವಣೆಗಾಗಿ ಸರ್ಕಾರಕ್ಕೆ ನಾವು ಯಾವುದೇ ಹಣ ಕೊಟ್ಟಿಲ್ಲ. ದಯವಿಟ್ಟು ಈ ವಿಚಾರವನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ 25ನೇ ತಾರೀಕು ಪ್ರತಿಭಟನಾ ಸಭೆ ಮಾಡಿದ್ದೆವು. 3000ಕ್ಕೂ ಹೆಚ್ಚು ಜನ ಸೇರಿದ್ದೆವು. ಅಬಕಾರಿ ಅಧಿಕಾರಿಗಳು ಪ್ರಮೋಷನ್ ಗೆ ನಾವು ಹಣ ಕೊಡಬೇಕು ಎಂದು ಹೇಳಿದ್ದರು. ಹಣಕೊಟ್ಟು ಟ್ರಾನ್ಸಫರ್ ಮಾಡಿಕೊಳ್ಳುತ್ತಿದ್ದೇವೆ. ಆದ್ದರಿಂದ ನಮಗೆ ಜಾಸ್ತಿ ಲಂಚ ಕೊಡಿ ಎಂದು ಕೇಳುತ್ತಿದ್ದಾರೆ ಎಂದು 3000ಕ್ಕೂ ಅಧಿಕ ಸನ್ನದುದಾರರು ಈ ವಿಚಾರವನ್ನು ಪ್ರತಿಭಟನೆಯಲ್ಲಿ ಹೇಳಿದ್ದೆವು. ಅದನ್ನು ಹೊರತುಪಡಿಸಿದರೆ ನಾವು ಯಾವುದೇ ಆರೋಪ ಮಾಡಿಲ್ಲ. ನಾವು ಯಾರಿಗೂ ಚುನಾವಣೆ ರಾಜಕೀಯಕ್ಕೆ ಹಣ ಕೊಟ್ಟಿಲ್ಲ. ದಯವಿಟ್ಟು ನಮ್ಮ ಹೇಳಿಕೆಯನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದರು.
ನಾವು ವ್ಯವಹಾರಸ್ಥರು, ನಾವ್ಯಾಕೆ ಚುನಾವಣೆಗೆ ಹಣ ಕೊಡಬೇಕು. ಹಿಂದಿನ ಸರಕಾರಗಳು ಇದ್ದಾಗಲೂ ನಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದೆವು. ಆ ಸರ್ಕಾರ ಇದ್ದಾಗಲೂ ಪ್ರಮೋಷನ್ ಗೆ ಟ್ರಾನ್ಸಫರ್ ಗೆ ಮಂತ್ರಿಗಳು ಹಣ ತೆಗೆದುಕೊಳ್ಳುತ್ತಿದ್ದರು. 15 ವರ್ಷಗಳಿಂದ ಇದೇ ರೀತಿ ನಡೆದುಕೊಂಡು ಬರುತ್ತಿದೆ. ಈಗ ಸಮಸ್ಯೆ ಮತ್ತಷ್ಟು ಉಲ್ಬಣ ಆಗಿದೆ ಎಂದು ಬಿಜೆಪಿ ನಾಯಕರು ಮತ್ತು ಪ್ರಧಾನಿ ನರೇಂದ್ರ ಮೋದಿ ಆರೋಪಗಳಿಗೆ ತಿರುಗೇಟು ನೀಡಿದರು.
PublicNext
12/11/2024 12:12 pm