ಹವಾನಾ : ಪೂರ್ವ ಕ್ಯೂಬಾದಲ್ಲಿ ಇಂದು ಮುಂಜಾನೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು ದೇಶದ 2ನೇ ಅತಿದೊಡ್ಡ ನಗರವಾದ ಸ್ಯಾಂಟಿಯಾಗೊ ಡಿ ಕ್ಯೂಬಾ ಮತ್ತು ಹತ್ತಿರದ ಪ್ರದೇಶಗಳಲ್ಲಿ ತೀವ್ರ ಹಾನಿಯಾಗಿದೆ. ಇದಕ್ಕೂ ಮೊದಲು 5.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
ಕ್ಯೂಬಾದ ಮಾಜಿ ಅಧ್ಯಕ್ಯ ದಿ.ಫಿಡೆಲ್ ಕ್ಯಾಸ್ಟ್ರೋ ಅವರು ಕ್ಯೂಬನ್ ಕ್ರಾಂತಿಯ ಸಮಯದಲ್ಲಿ ತಮ್ಮ ಪ್ರಧಾನ ಕಚೇರಿಯನ್ನು ಹೊಂದಿದ್ದ ಬಾರ್ಟೋಲೋಮ್ ಮಾಸೊ ಬಳಿಯ ಗ್ರ್ಯಾನ್ಮಾ ಪ್ರಾಂತ್ಯದ ಕರಾವಳಿಯಲ್ಲಿ ಭೂಕಂಪವಾಗಿದೆ. ಯಾವುದೇ ಸಾವು ನೋವುಗಳ ಬಗ್ಗೆ ವರದಿಯಾಗಿಲ್ಲ.
ಭೂಕಂಪದ ಕೇಂದ್ರ 14 ಕಿಮೀ (8.7 ಮೈಲುಗಳು) ಆಳದಲ್ಲಿದೆ. ಯಾವುದೇ ಸುನಾಮಿ ಭೀತಿ ಇಲ್ಲ ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೆ ತಿಳಿಸಿದೆ.
ಭೂಕಂಪದ ಪರಿಣಾಮದಿಂದ ಹಲವೆಡೆ ಭೂಕುಸಿತ ಸಂಭವಿಸಿದೆ. ಹಲವಾರು ಮನೆಗಳು ಹಾನಿಗೊಳಗಾಗಿವೆ. ಅಲ್ಲದೇ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈ ಸಮಯದಲ್ಲಿ ನಮ್ಮ ಮೊದಲ ಆದ್ಯತೆ ಜನರ ಜೀವಗಳನ್ನು ಉಳಿಸುವುದು ಎಂದು ಕ್ಯೂಬಾದ ಅಧ್ಯಕ್ಷ ಮಿಗುಯೆಲ್ ಡಯಾಜ್-ಕ್ಯಾನೆಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭೂಕಂಪ ಸಂಭವಿಸಿದ ಪ್ರದೇಶದ ಹಳೆಯದಾದ ಕಟ್ಟಡಗಳು ತೀವ್ರ ಹಾನಿಗೆ ಒಳಗಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ಪ್ರಕಟಿಸಿವೆ.
PublicNext
11/11/2024 04:38 pm