ಶಿಮ್ಲಾ: ಸಮೋಸ ಕಾಣೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶ ನೀಡಿದೆ. ಹೌದು ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖು ಅವರಿಗೆಂದು ತಂದಿದ್ದ ಸಮೋಸಾ ಮತ್ತು ಕೇಕ್‌ಗಳನ್ನು ಅವರ ಭದ್ರತಾ ಸಿಬ್ಬಂದಿಗೆ ನೀಡಲಾಗಿತ್ತು. ಈ ಘಟನೆಯನ್ನು ಸಿಐಡಿ ತನಿಖೆಗೆ ವಹಿಸಿದ ವೇಳೆ ತನಿಖೆ ಮಾಡಿದ ಹಿರಿಯ ಅಧಿಕಾರಿಯೊಬ್ಬರು ‘ಸರ್ಕಾರಿ ವಿರೋಧಿ ಕೃತ್ಯ’ ಎಂದು ಹೇಳಿದ್ದಾರೆ.
ಸಿಎಂ ಸುಖ್ವಿಂದರ್ ಸಿಂಗ್ ಅವರು ಸಿಐಡಿ ಪ್ರಧಾನ ಕಚೇರಿಯ ಕಾರ್ಯಕ್ರಮದಲ್ಲಿ ಅಕ್ಟೋಬರ್ 21ರಂದು ಪಾಲ್ಗೊಂಡಿದ್ದರು. ಈ ವೇಳೆ ಐಜಿ ಶ್ರೇಣಿಯ ಅಧಿಕಾರಿಯೊಬ್ಬರು ಸಿಎಂಗಾಗಿ ಲಕ್ಕರ್ ಬಜಾರ್‌ನಲ್ಲಿರುವ ಹೋಟೆಲ್ ರಾಡಿಸನ್ ಬ್ಲೂನಿಂದ ತಿನಿಸುಗಳನ್ನು ತರಿಸಿದ್ದರು. ಒಟ್ಟು ಮೂರು ಸೀಲ್ಡ್ ಬಾಕ್ಸ್‌ಗಳಲ್ಲಿ ಸಮೋಸಾ ಹಾಗೂ ಕೇಕ್‌ಗಳನ್ನು ಎಎಸ್‌ಐ ಮತ್ತು ಹೆಡ್ ಕಾನ್ಸ್ಟೆಬಲ್ಗೆ ಹೇಳಿ ಐಜಿ ತರಿಸಿದ್ದರು.
ಮೂರು ಬಾಕ್ಸ್‌ಗಳಲ್ಲಿನ ತಿಂಡಿಯನ್ನ ಸಿಎಂಗೆ ನೀಡಬೇಕೇ ಎಂದು ಕರ್ತವ್ಯದಲ್ಲಿದ್ದ ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿಯನ್ನು ಕೇಳಿದ್ದರು. ಆದರೆ ಅವರು ಅವುಗಳನ್ನು ಮೆನುವಿನಲ್ಲಿ ಸೇರಿಸಿಲ್ಲ ಎಂದು ಹೇಳಿದ್ದರು ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಕಾರ್ಯಕ್ರಮದಲ್ಲಿ ಸಮನ್ವಯದ ಕೊರತೆಯಿಂದಾಗಿ ಸಿಎಂಗೆ ನೀಡಬೇಕಿದ್ದ ಅವುಗಳನ್ನು ಸಿಎಂ ಭದ್ರತಾ ಅಧಿಕಾರಿಗಳಿಗೆ ನೀಡಲಾಗಿತ್ತು ಎಂದು ಎಸ್ಪಿ ಶ್ರೇಣಿಯ ಅಧಿಕಾರಿ ನಡೆಸಿದ ವಿಚಾರಣೆಯಲ್ಲಿ ಬಹಿರಂಗವಾಗಿದೆ.
ಈ 3 ಬಾಕ್ಸ್ನಲ್ಲಿದ್ದ ತಿನಿಸುಗಳನ್ನು ಸಿಎಂಗೆ ನೀಡಬೇಕು ಎನ್ನುವುದು ಎಸ್‌ಐಗೆ ಮಾತ್ರ ತಿಳಿದಿತ್ತು. ಆದರೆ ಇದರ ಮಾಹಿತಿ ಇಲ್ಲದೇ ಲೇಡಿ ಇನ್ಸ್‌ಪೆಕ್ಟರ್, ಮೆಕನಿಕಲ್ ಟ್ರಾನ್ಸ್ಪೋರ್ಟ್ ಸೆಕ್ಷನ್ಗೆ ಕಳುಹಿಸಿದರು. ಈ ವೇಳೆ ಮೂರು ಬಾಕ್ಸ್‌ಗಳಲ್ಲಿ ಹಲವರು ಕೈಯಾಡಿಸಿದ್ದಾರೆ. ಇದನ್ನೆಲ್ಲವನ್ನು ತನಿಖೆ ಮಾಡಿದ ಸಿಐಡಿಯ ಹಿರಿಯ ಅಧಿಕಾರಿ ತಮ್ಮ ಟಿಪ್ಪಣಿಯ ವಿಚಾರಣಾ ವರದಿಯಲ್ಲಿ ಎಲ್ಲ ಅಧಿಕಾರಿಗಳ ಹೆಸರು ಉಲ್ಲೇಖ ಮಾಡಿ, ಇವರೆಲ್ಲರೂ ಸರ್ಕಾರ ಹಾಗೂ ಸಿಐಡಿ ವಿರುದ್ಧವಾಗಿ ವರ್ತನೆ ಮಾಡಿದ್ದಾರೆ. ಇದರಿಂದ ವಿವಿಐಪಿ ವ್ಯಕ್ತಿಗಳಿಗೆ ತನಿಸುಗಳನ್ನು ನೀಡಲಾಗಲಿಲ್ಲ ಎಂದು ಬರೆದು ತನಿಖೆ ಪೂರ್ಣಗೊಳಿಸಿದ್ದಾರೆ.
PublicNext
09/11/2024 08:58 am