ಚಿಕ್ಕಮಗಳೂರು: ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನ್ವರ್ ಕೊಲೆಯಾಗಿ ಆರು ವರ್ಷಗಳೇ ಕಳೆದಿದ್ದು, ಇದುವರೆಗೂ ಕೊಲೆಗಾರರ ಪತ್ತೆಯಾಗಿಲ್ಲ! ಈ ಹಿನ್ನೆಲೆಯಲ್ಲಿ ಎಡಿಜಿಪಿ ಬಿ.ಕೆ. ಸಿಂಗ್ ಪ್ರಕರಣದ ತನಿಖೆಗೆ ಇಳಿದಿದ್ದು ಇಂದು ಆಗಮಿಸಿದ ಅವರು ಮಾಹಿತಿ ಕಲೆ ಹಾಕಿದ್ದಾರೆ.
ಬಿಜೆಪಿ ಮುಖಂಡ ಅನ್ವರ್ ಅವರನ್ನು 2018ರ ಜೂನ್ 22ರಂದು ಗೌರಿ ಕಾಲುವೆ ಬಳಿ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣ ಇಡೀ ಚಿಕ್ಕಮಗಳೂರು ನಗರವನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣವನ್ನು 2019ರಲ್ಲಿ ಅಂದಿನ ಬಿಜೆಪಿ ಸರ್ಕಾರ ಸಿಐಡಿಗೆ ವಹಿಸಿತ್ತು. ಆದರೂ ಅನ್ವರ್ ಕೊಲೆ ಪ್ರಕರಣದ ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಡಿಜಿಪಿ ಬಿ.ಕೆ.ಸಿಂಗ್ ಅವರು ಖುದ್ದು ತನಿಖೆಗೆ ಇಳಿದಿದ್ದಾರೆ. ಇಂದು ನಗರಕ್ಕೆ ಆಗಮಿಸಿದ ಅವರು, ಅನ್ವರ್ ಕೊಲೆ ನಡೆದ ಜಾಗ, ಅಲ್ಲಿನ ಮಾರ್ಗಗಳು ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳಿಂದ ಪಡೆದಿದ್ದಾರೆ.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು. ಸದ್ಯ ಕೊಲೆ ಪ್ರಕರಣದ ತನಿಖೆಯನ್ನು ಎಡಿಜಿಪಿ ಅವರೇ ಕೈಗೆತ್ತಿಕೊಂಡಿರುವುದರಿಂದ ಅನ್ವರ್ ಕುಟುಂಬದಲ್ಲಿ ಆಶಾಭಾವನೆ ಮೂಡಿಸಿದೆ.
PublicNext
26/10/2024 08:27 pm