ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ದೇಶ ಕಟ್ಟುವಲ್ಲಿ ಪ್ರತಿಯೊಬ್ಬರು ಕಾಯಾ ವಾಚಾ ಮನಸಾ ಕರ್ತವ್ಯ ನಿರ್ವಹಿಸಬೇಕು - ನ್ಯಾ.ಕೆ. ಎಸ್ ಗಂಗಣ್ಣನವರ್

ಉಡುಪಿ : ಹುತಾತ್ಮರ ತ್ಯಾಗ ಮತ್ತು ಬಲಿದಾನಗಳು ನಮ್ಮ ದೇಶದ ಅಖಂಡತೆ ಮತ್ತು ಸಾರ್ವಭೌಮತೆಯನ್ನು ಎತ್ತಿ ಹಿಡಿಯಲು ಕಾರಣವಾಗಿದೆ ಎಂದು ಉಡುಪಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಕೆ ಎಸ್ ಗಂಗಣ್ಣನವರ್ ಹೇಳಿದರು.

ಅವರು ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಪರೇಡ್ ಮೈದಾನದಲ್ಲಿ ಪೊಲೀಸ್ ಹುತಾತ್ಮ ದಿನದ ಅಂಗವಾಗಿ ಮೃತರ ಗೌರವಾರ್ಥ ನಿರ್ಮಿಸಲಾದ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ಮಾತನಾಡಿದರು.

ದೇಶವೆಂದರೆ ಕೇವಲ ಭೌಗೋಳಿಕ ವಸ್ತುಗಳಿಂದ ಆಗಿರುವಂತಹದ್ದಲ್ಲ ,ಬದಲಾಗಿ ಅದು ಎಲ್ಲಾ ರೀತಿಯ ಮಾನವ, ಪ್ರಾಣಿ ಹಾಗೂ ಸಸ್ಯ ಸಂಕುಲಗಳನ್ನು ಒಳಗೊಂಡ ವ್ಯವಸ್ಥೆ. ಈ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಬಲಿಕೊಟ್ಟ ಹುತಾತ್ಮರ ಬಲಿದಾನಗಳನ್ನು ನಾವು ನೆನೆದುಕೊಂಡು ಅದರ ಮೂಲಕ ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯ ಪ್ರತೀಕವಾಗಬೇಕು. ದೇಶ ಕಟ್ಟುವಲ್ಲಿ ಪ್ರತಿಯೊಬ್ಬರು ಕಾಯಾ ವಾಚಾ ಮನಸಾ ಕರ್ತವ್ಯ ನಿರ್ವಹಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಮಾತನಾಡಿ, 1959ರ ಅಕ್ಟೋಬರ್ 21 ರಂದು ಲಡಾಕ್ ಬಳಿಯಲ್ಲಿ ಭಾರತ ಹಾಗೂ ಚೀನಾದ ಸೈನಿಕರ ಮಧ್ಯೆ ನಡೆದ ಗುಂಡಿನ ದಾಳಿಯಲ್ಲಿ ಸಿಆರ್‌ಪಿಎಫ್ ಯೋಧರು ಮೃತಪಟ್ಟಿದ್ದರು. ಅಂದಿನಿಂದ ದೇಶದಾದ್ಯಂತ ಪೊಲೀಸ್ ಸಿಬಂದಿಯ ಗೌರವಾರ್ಥ ಪೊಲೀಸ್ ಹುತಾತ್ಮ ದಿನವನ್ನು ಆಚರಿಸಲಾಗುತ್ತಿದೆ.

ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ಒಟ್ಟು 216 ಜನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯದ ವೇಳೆ ಪ್ರಾಣಾರ್ಪಣೆ ಮಾಡಿದ್ದಾರೆ. ಅದರಲ್ಲಿ ಕರ್ನಾಟಕದ ಐದು ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ, ಕರಾವಳಿ ಕಾವಲು ಪೊಲೀಸ್ ಪಡೆಯ ವರಿಷ್ಠಾಧಿಕಾರಿ ಮಿಥುನ್ ಎಚ್ ಎನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್ ಟಿ ಸಿದ್ದಲಿಂಗಪ್ಪ, ಪಿ ಎ ಹೆಗ್ಡೆ ಹಾಗೂ ಇತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

21/10/2024 04:01 pm

Cinque Terre

1.13 K

Cinque Terre

0

ಸಂಬಂಧಿತ ಸುದ್ದಿ