ಬೆಂಗಳೂರು : ವಿಕಾಸಸೌಧದಲ್ಲಿ ರಾಜ್ಯದ ಎಲ್ಲಾ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಭೆ ನಡೆಸಿದ ಸಚಿವ ಕೃಷ್ಣ ಬೈರೇಗೌಡ, “ಬಗರ್ ಹುಕುಂ ಅರ್ಜಿಗಳ ವಿಲೇವಾರಿಗೆ ಅಧಿಕಾರಿಗಳು ಈಗಲೂ ಮೀನಾಮೇಷ ಎಣಿಸುವುದು ಸರಿಯಲ್ಲ.
ಹೀಗಾಗಿ ಎಲ್ಲಾ ತಹಶೀಲ್ದಾರರಿಗೆ ಅಕ್ಟೋಬರ್ ಹಾಗೂ ನವೆಂಬರ್ ಅಂತ್ಯದವರೆಗೆ ಎರಡು ತಿಂಗಳ ಗಡುವು ನೀಡುತ್ತಿದ್ದು, ಈ ಅವಧಿಯಲ್ಲೂ ಬಗರ್ ಹುಕುಂ ಅರ್ಜಿಗಳ ಸಮರ್ಪಕ ವಿಲೇವಾರಿ ಹಾಗೂ ಅರ್ಹ ರೈತರಿಗೆ ಭೂ ಮಂಜೂರು ಆಗದಿದ್ದರೆ, ಸಂಬಂಧಿತ ತಹಶೀಲ್ದಾರರಿಗೆ ನೋಟೀಸ್ ಜಾರಿಗೊಳಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
“ಬಗರ್ ಹುಕುಂ” ಅರ್ಜಿ ವಿಲೇವಾರಿ ಕೆಲಸಗಳಿಗೆ ಸಂಬಂಧಿಸಿ ಸಕಾರಾತ್ಮಕವಾಗಿ ಕೆಲಸ ನಿರ್ವಹಿಸದ ತಹಶೀಲ್ದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.
“ಅರ್ಹ ಭೂ ಹೀನರಿಗೆ ಜಮೀನು ಮಂಜೂರು ಮಾಡಬೇಕು ಎಂಬುದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಇದೇ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಅಕ್ರಮ ಸಕ್ರಮ ಯೋಜನೆಯ ಅಡಿ “ಬಗರ್ ಹುಕುಂ” ಅರ್ಜಿ ಆಹ್ವಾನಿಸಲಾಯಿತು. ಅಲ್ಲದೆ, ಕಳೆದ ಒಂದು ವರ್ಷದಿಂದ ಸ್ವತಃ ನಾನು ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಮಾಡುತ್ತಾ, ಬಗರ್ ಹುಕುಂ ಸಂಬಂಧಿತ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದರೂ, ಕೆಲವು ಅಧಿಕಾರಿಗಳ ಕೆಲಸ ತೃಪ್ತಿಕರವಾಗಿಲ್ಲ. ಬಡವರ ರೈತರ ಪರ ಕೆಲಸ ಮಾಡಲು ಅಸಡ್ಡೆ ತೋರುತ್ತಿದ್ದಾರೆ” ಎಂದು ಅಸಮಾಧಾನ ಹೊರಹಾಕಿದರು.
PublicNext
05/10/2024 08:37 pm