ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಪಿಸ್ತೂಲ್‌ನಿಂದ ಏರ್ ಫೈರ್ ಮಾಡಿದ್ದ ರೌಡಿಶೀಟರ್ ಸಹಿತ 6 ಜನ ಆರೋಪಿಗಳನ್ನ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರೌಡಿಶೀಟರ್ ಸಿರಾಜುದ್ದೀನ್ ಅಲಿಯಾಸ್ ಬುಲ್ಡು, ಇಲಿಯಾಸ್ ಸೇರಿದಂತೆ 6 ಜನರನ್ನು ಬಂಧಿಸಲಾಗಿದೆ. ಸುದ್ದುಗುಂಟೆಪಾಳ್ಯ ಠಾಣೆಯ ರೌಡಿಶೀಟರ್ ಸಿರಾಜುದ್ದೀನ್, ಹಾಗೂ ಫ್ಲೈವುಡ್ ಅಂಗಡಿ ಮಾಲೀಕ ಇಲಿಯಾಸ್ ನಡುವೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಗಲಾಟೆಯಾಗಿತ್ತು. ಸೆಪ್ಟೆಂಬರ್ 20ರಂದು ರಾತ್ರಿ ಪಿಸ್ತೂಲ್ ಹಿಡಿದು ಬಂದಿದ್ದ ಸಿರಾಜುದ್ದೀನ್, ಇಲಿಯಾಸ್‌ನ ಎದೆಗೆ ಪಿಸ್ತೂಲ್ ಇಟ್ಟು ಬೆದರಿಸಿದ್ದ. ಅಷ್ಟರಲ್ಲಿ ಅಕ್ಕಪಕ್ಕದ ಅಂಗಡಿಯಲ್ಲಿದ್ದವರು ಜಮಾಯಿಸಿದ್ದರು. ಈ ವೇಳೆ ಯಾರು ಅಡ್ಡ ಬರಬಾರದು ಎಂದು ಬೆದರಿಸಿದ್ದ ಸಿರಾಜುದ್ದೀನ್ ಒಂದು ಸುತ್ತು ಏರ್ ಫೈರ್ ಮಾಡಿದ್ದ. ಬಳಿಕ ಸ್ಥಳದಿಂದ ಬೈಕ್‌ನಲ್ಲಿ ಎಸ್ಕೇಪ್ ಆಗಲು ಮುಂದಾದಾಗ ಇಲಿಯಾಸ್ ಕಡೆಯವರು ಬೈಕ್ ಹಿಂಬದಿ ಕುಳಿತಿದ್ದ ಮೊಹಮ್ಮದ್ ಖುರ್ರಂ ಪಾಷಾ ಎಂಬಾತನನ್ನು ಹಿಡಿದುಕೊಂಡು ಥಳಿಸಿದ್ದರು. ಬಳಿಕ ಘಟನೆ ಸಂಬಂಧ ಸ್ಥಳಿಯರು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಘಟನೆ ಸಂಬಂಧ ಸಿರಾಜುದ್ದೀನ್ ಹಾಗೂ ಇಲಿಯಾಸ್ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಒಟ್ಟು 6 ಜನರನ್ನ ಬಂಧಿಸಿರುವುದಾಗಿ ತಿಳಿಸಿದ್ದಾರೆ.
Kshetra Samachara
05/10/2024 05:08 pm