ಬೆಂಗಳೂರು : ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಆಪ್ತೆ ಎಂದು ಪರಿಚಯಿಸಿಕೊಂಡು, ಚಿನ್ನ ಖರೀದಿ ನೆಪದಲ್ಲಿ ಜ್ಯುವೆಲ್ಲರಿ ಶಾಫ್ ಮಾಲೀಕರಿಗೆ ವಂಚಿಸಿದ ಆರೋಪದಡಿ ಮಹಿಳೆಯೊಬ್ಬರನ್ನ ಬೆಂಗಳೂರಿನ ಪುಲಿಕೇಶಿ ನಗರ ಉಪವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಬಾಗಲಗುಂಟೆ ನಿವಾಸಿ ಶ್ವೇತಾ ಗೌಡ ಬಂಧಿತ ಆರೋಪಿ. ಕಮರ್ಷಿಯಲ್ ಸ್ಟ್ರೀಟ್‌ನ ನವರತ್ನ ಜ್ಯುವೆಲ್ಲರ್ಸ್ ಮಾಲೀಕ ಸಂಜಯ್ ಭಾಫ್ನಾ ಅವರಿಂದ ಸುಮಾರು 2.945 ಕೆ.ಜಿ ಚಿನ್ನ ಪಡೆದು ವಂಚಿಸಿದ ಆರೋಪದಡಿ ಆರೋಪಿಯನ್ನ ಬಂಧಿಸಲಾಗಿದೆ.
ನವರತ್ನ ಜ್ಯುವೆಲ್ಲರ್ಸ್ ಮಾಲೀಕ ಸಂಜಯ್ ಭಾಫ್ನಾ ಅವರ ಮಳಿಗೆಗೆ ಬರುತ್ತಿದ್ದ ಆರೋಪಿ, ಮಾಜಿ ಸಚಿವರ ಆಪ್ತೆ ಎಂದು ಪರಿಚಯಿಸಿಕೊಂಡಿದ್ದಳು. ತಾನು 'ಚಿನ್ನಾಭರಣ ವ್ಯಾಪಾರ ಆರಂಭಿಸುತ್ತಿದ್ದು, ನಿಮ್ಮಿಂದಲೇ ಆಭರಣ ಖರೀದಿಸುತ್ತೇನೆ' ಎಂದಿದ್ದಳು. ಸಂಜಯ್ ಸಹ ಇದಕ್ಕೆ ಒಪ್ಪಿದ್ದರು. ಆರೋಪಿ ಎರಡ್ಮೂರು ಬಾರಿ ಚಿನ್ನಾಭರಣಗಳನ್ನ ಮನೆಯವರಿಗೆ ತೋರಿಸಿಕೊಂಡು ಬರುವುದಾಗಿ ಅನುಮತಿ ಪಡೆದು ಕೊಂಡೊಯ್ದಿದ್ದಳು. ಆದರೆ ಆಗಸ್ಟ್ 26ರಿಂದ ಡಿಸೆಂಬರ್ 8ರವರೆಗಿನ ಅವಧಿಯಲ್ಲಿ ಆರೋಪಿ ಹೇಳಿದ್ದ ವಿಳಾಸಕ್ಕೆ ಜ್ಯುವೆಲ್ಲರಿ ಶಾಫ್ ಸಿಬ್ಬಂದಿ ಸುಮಾರು 2.42 ಕೋಟಿ ರೂ ಮೌಲ್ಯದ 2.945 ಕೆಜಿ ಚಿನ್ನ ಹಾಗೂ ವಜ್ರಾಭರಣಗಳನ್ನ ತಲುಪಿಸಿದ್ದರು. ಆದರೆ ಆರೋಪಿ ಯಾವುದೇ ಚಿನ್ನಾಭರಣವನ್ನೂ ಹಿಂದಿರುಗಿಸಿರಲಿಲ್ಲ. ಚಿನ್ನ ಮರಳಿಸಿ ಇಲ್ಲ ಹಣ ಪಾವತಿಸಿ ಎಂದು ಕೇಳಿದಾಗ ಧಮ್ಕಿ ಹಾಕಿದ್ದಾಳೆ ಎಂದು ಜ್ಯುವೆಲರ್ಸ್ ಮಾಲೀಕ ಸಂಜಯ್ ಭಾಪ್ನಾ ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಮಾಜಿ ಶಾಸಕ ವರ್ತೂರು ಪ್ರಕಾಶ್ ಅವರಿಗೆ ಸೇರಿದ ಕಾರಿನಲ್ಲೇ ಆರೋಪಿ ಶ್ವೇತಾ ಗೌಡ ಮೈಸೂರಿಗೆ ತೆರಳಿದ್ದಳು.
ಇತ್ತ ಪ್ರಕರಣದ ತನಿಖೆ ಕೈಗೊಂಡ ಪುಲಿಕೇಶಿನಗರ ಉಪ ವಿಭಾಗದ ಎಸಿಪಿ ಗೀತಾ ನೇತೃತ್ವದ ತಂಡ ಮೈಸೂರಿಗೆ ತೆರಳಿ ಆರೋಪಿ ಶ್ವೇತಾ ಗೌಡಳನ್ನ ಬಂಧಿಸಿದೆ. ಆರೋಪಿಯಿಂದ ಚಿನ್ನ ಹಾಗೂ ಕಾರು ಸೇರಿದಂತೆ ಇತರ ವಸ್ತುಗಳು ಜಪ್ತಿ ಮಾಡಲಾಗಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ ಶ್ವೇತಾಗೌಡ ಸುಲಭವಾಗಿ ಹಣ ಸಂಪಾದಿಸಲು ಅಡ್ಡದಾರಿ ಹಿಡಿದಿದ್ದಳು. ಈ ಮೊದಲು ಇದೇ ರೀತಿ ಚಿನ್ನದ ವ್ಯಾಪಾರಿಗೆ ಮೋಸ ಮಾಡಿದ್ದ ಆರೋಪದಡಿ ಯಲಹಂಕ ಠಾಣೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದರು. ಜಾಮೀನು ಪಡೆದು ಹೊರ ಬಂದ ಶ್ವೇತಾ ಗೌಡ ಮತ್ತೆ ತನ್ನ ಚಾಳಿ ಮುಂದುವರೆಸಿದ್ದಳು ಎಂದು ತಿಳಿದು ಬಂದಿದೆ.
ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಮನೆ ವಿಳಾಸ ನೀಡಿ ಆರೋಪಿ 2.945 ಕೆಜಿ ಚಿನ್ನ ಪಡೆದಿದ್ದಳು. ಆದ್ದರಿಂದ ಪ್ರಕರಣದಲ್ಲಿ ವರ್ತೂರು ಪ್ರಕಾಶ್ ಅವರಿಗೂ ಸಹ ತನಿಖೆ ಸಂಕಷ್ಟ ಎದುರಾಗಿದೆ. ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ವರ್ತೂರು ಪ್ರಕಾಶ್ ಅವರಿಗೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ನೋಟಿಸ್ ನೀಡಿದ್ದಾರೆ.
ಆರೋಪಿ ಮಹಿಳೆ 3-4 ತಿಂಗಳ ಮುಂಚೆ ನಮ್ಮ ಮನೆಗೆ ಬಂದು, ಸಮಾಜಸೇವಕಿ ಎಂದು ಪರಿಚಯಿಸಿಕೊಂಡಿದ್ದರು.ಆಕೆಯೂ ನನಗೆ ತಿಳಿಸಿ ಒಡವೆ ಖರೀದಿಸಿಲ್ಲ, ಜ್ಯುವೆಲ್ಲರಿ ಮಾಲೀಕರು ನನಗೆ ತಿಳಿಸಿಲ್ಲ.ಆಕೆಯ ಬಿಜಿನೆಸ್, ಬಂಗಾರದ ಬಗ್ಗೆ ನನ್ನ ಬಳಿ ಪ್ರಸ್ತಾಪ ಮಾಡಿಯೇ ಇಲ್ಲ.ನನಗೂ ನಿನ್ನೆಯೇ ಗೊತ್ತಾಗಿದೆ. ನಮ್ಮ ಮನೆ ಬಳಿ ಬೇರೆ ಜನ ಬಂದ ಹಾಗೇ ಆಕೆಯೂ ಬಂದಿದ್ದಾಳೆ.ದೂರು ನೀಡಿರುವ ವಿಚಾರ ಪೊಲೀಸರಿಂದ ನಿನ್ನೆ ತಿಳಿಯಿತು. ಸೋಮವಾರ ವಿಚಾರಣೆಗೆ ಹೋಗಲಿದ್ದೇನೆ ಎಂದಿದ್ದಾರೆ.
PublicNext
21/12/2024 02:32 pm