ಯಾದಗಿರಿ: ಹೈಕೋರ್ಟ್ ನ್ಯಾಯಾಧೀಶ ವೇದವ್ಯಾಸಚಾರ್ಯ ಶ್ರೀಶಾನಂದ ಅವರು ಹೈಕೋರ್ಟ್ ಬೆಂಚ್‌ನಲ್ಲಿ ವಕೀಲರ ಜೊತೆ ವಾದ ಮಾಡುವ ವೇಳೆ ಸುರಪುರ ನಾಯಕರ ಬಗ್ಗೆ ಅವಹೇಳನ ಹೇಳಿಕೆ ನೀಡಿದ್ದರಿಂದ ಇಂದು ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ ಬಂದ್ ಕರೆ ನೀಡಲಾಗಿತ್ತು.
ಸುರಪುರದಲ್ಲಿ ಯಾರೇ ಮದುವೆಯಾದರೂ ಸುರಪುರದ ನಾಯಕನ ಜೊತೆಯಲ್ಲಿ ಆ ಹೆಣ್ಣನ್ನು ಪ್ರಥಮ ರಾತ್ರಿಗೆ ಒಪ್ಪಿಸಿದ ಮೇಲೆ ನಂತರ ಗಂಡನು ಉಪಯೋಗಿಸಬಹುದು, ಈ ಪದ್ಧತಿ ಸುರಪುರದಲ್ಲಿದೆ ಅಂತಾ ಕೀಳುಮಟ್ಟದಾಗಿ ಮಾತಾಡಿದ ನ್ಯಾಯಾಧೀಶರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಮೂಹ ಸಂಘಟನೆಗಳು ಆಗ್ರಹಿಸಿದವು.
ಇನ್ನು, ಈ ಪದ್ಧತಿ ಐತಿಹ್ಯವಾಗಿಯೂ ಇಲ್ಲಿಲ್ಲ. ಇದು ಶೂರರು, ಸಂತ ಶರಣರ, 13 ರಾಜರು ಆಳ್ವಿಕೆ ಮಾಡಿದ ಸಗರ ನಾಡಿದು. ಮೊಘಲರಿಂದ ತಿರುಪತಿ ತಿಮ್ಮಪ್ಪ ಸ್ವಾಮಿಯ ದೇಗುಲ ರಕ್ಷಣೆ ಮಾಡಿದ ಕೀರ್ತಿ ಸುರಪುರಕ್ಕಿದೆ. 1857ರ ಪ್ರಥಮ ಸ್ವಾತಂತ್ರ್ಯ ಹೋರಾಟದಲ್ಲಿ ದಕ್ಷಿಣ ಭಾರತದ ನೇತೃತ್ವವನ್ನು ಸುರಪುರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವಹಿಸಿದ್ದು, ಬ್ರಿಟಿಷರ ವಿರುದ್ಧ ಹೋರಾಡಿದ ಈ ನೆಲಕ್ಕೆ ಈ ರೀತಿ ಹೇಳಿಕೆ ನೀಡಿದ್ದು ಖಂಡನೀಯ ಎಂದಿದ್ದಾರೆ.
ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೊಟ್ಟೆಪ್ಪಗೋಳ ಮುಖಾಂತರ ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
13/01/2025 10:12 pm