ಕುಮಟಾ ಪುರಸಭೆಯ ಹಿಂದಿನ ಮುಖ್ಯಾಧಿಕಾರಿ ಸುರೇಶ ಎಂ.ಕೆ. ಅವರ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಸೂಕ್ತ ತನಿಖೆ ನಡೆಸಿ ಸಾರ್ವಜನಿಕರಿಗೆ ಆ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಕುಮಟಾ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ನೇತೃತ್ವದಲ್ಲಿ ಪುರಸಭೆ ಎದುರು ಜಮಾಯಿಸಿದ ಕಾರ್ಯಕರ್ತರು, ಪುರಸಭೆಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಘೋಷಣೆ ಕೂಗಿದರು. ಪುರಸಭೆಯ ಹಿಂದಿನ ಮುಖ್ಯಾಧಿಕಾರಿ ಸುರೇಶ ಎಂ.ಕೆ. ಅವರು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಇಲ್ಲಿಂದ ವರ್ಗಾವಣೆ ಮಾಡಲಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಅವರು ಹೇಳಿಕೆ ನೀಡಿದ್ದರು. ಅವರು ನಡೆಸಿದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ಜಿಲ್ಲಾಡಳಿತ ಹಾಗೂ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಿ ಆಗ್ರಹಿಸಲಾಗಿತ್ತು. ಆದರೆ ಇದುವರೆಗೂ ತನಿಖೆ ನಡೆಸದೇ ಭ್ರಷ್ಟಾಚಾರಕ್ಕೆ ಬೆಂಬಲ ನೀಡಿದ್ದಾರೆಂದು ಶಾಸಕರ ವಿರುದ್ಧ ಧಿಕ್ಕಾರ ಕೂಗಿದರು.
ಇನ್ನು ಉಪವಿಭಾಗಾಧಿಕಾರಿ ಸ್ಥಳಕ್ಕಾಗಮಿಸಿ, ಲಿಖಿತ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು, ರಸ್ತೆಯಲ್ಲಿ ಕಳಿತು ಪ್ರತಿಭಟನೆ ನಡೆಸಲು ಮುಂದಾದಾಗ ಪಿಎಸ್ಐ ರವಿ ಗುಡ್ಡಿ ನೇತೃತ್ವದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಿದರು. ಬಳಿಕ ಸ್ಥಳಕ್ಕಾಗಮಿಸಿದ ಗ್ರೇಡ್-2 ತಹಸೀಲ್ದಾರ ಸತೀಶ ಗೌಡ ಮನವಿ ಸ್ವೀಕರಿಸಿ, ಮೇಲಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ರವಾನಿಸಲಾಗುವುದು ಎಂದು ತಿಳಿಸಿದರು.
PublicNext
27/09/2022 12:35 pm