ಶಾಲೆ ಪಕ್ಕದಲ್ಲೇ ಹೆದ್ದಾರಿ ಹಾದುಹೋಗಿರುವ ಪರಿಣಾಮ ಪ್ರತಿನಿತ್ಯ ಮಕ್ಕಳು ಹರಸಾಹಸಪಟ್ಟು ಶಾಲೆಗೆ ತೆರಳಬೇಕಾದ ಸ್ಥಿತಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಅಬ್ಬಿತೋಟ ಗ್ರಾಮದ ಶಾಲೆಯ ಮಕ್ಕಳಿಗೆ ಎದುರಾಗಿದೆ.
ತಾಲ್ಲೂಕಿನಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡೇ ಅಬ್ಬಿತೋಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಹೀಗಾಗಿ ಪ್ರತಿನಿತ್ಯ ಶಾಲೆಗೆ ಆಗಮಿಸುವ ಮಕ್ಕಳು ಜೀವ ಕೈಯಲ್ಲಿ ಹಿಡಿದು ಹೆದ್ದಾರಿ ದಾಟಿ ಸಾಗಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ರಸ್ತೆಯಾಗಿದ್ದು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಿವಿಧ ಬಗೆಯ ವಾಹನಗಳು ಹಾದು ಹೋಗುತ್ತವೆ.
ಅದರಲ್ಲೂ ಹೆದ್ದಾರಿ ಮಾರ್ಗವಾಗಿರುವುದರಿಂದಾಗಿ ಅತೀ ವೇಗವಾಗಿ ವಾಹನಗಳು ಸಂಚಾರ ಮಾಡುವುದರಿಂದಾಗಿ ವಿದ್ಯಾರ್ಥಿಗಳು ರಸ್ತೆ ದಾಟಲು ಹರಸಾಹಸ ಪಡಬೇಕಾಗಿದೆ.
ಅಬ್ಬಿತೋಟ ಗ್ರಾಮದಿಂದ ಪ್ರತಿನಿತ್ಯ ಮೂವತ್ತಕ್ಕೂ ಅಧಿಕ ಮಕ್ಕಳು ಹೆದ್ದಾರಿ ಪಕ್ಕದ ಹಿರಿಯ ಪ್ರಾಥಮಿಕ ಶಾಲೆಗೆ ತೆರಳುತ್ತಾರೆ. ಶಾಲೆಯ ಸಮೀಪದಲ್ಲಿ ಹಾದುಹೋಗಿರುವ ಹೆದ್ದಾರಿ 45 ಮೀಟರ್ ನಷ್ಟು ಅಗಲವಿದ್ದು, ರಸ್ತೆ ತಿರುವಿನಲ್ಲಿ ಶಾಲೆಯಿದೆ. ಹೀಗಾಗಿ ರಸ್ತೆ ದಾಟುವ ವೇಳೆ ಎಷ್ಟೋ ಬಾರಿ ವಾಹನ ಆಗಮಿಸುವುದೇ ಅರಿವಿಗೆ ಬರುವುದಿಲ್ಲವಾಗಿದ್ದು, ವೇಗವಾಗಿ ಆಗಮಿಸುವುದರಿಂದ ಮಕ್ಕಳನ್ನ ಶಾಲೆಗೆ ಕಳುಹಿಸಲು ಪಾಲಕರೂ ಸಹ ಆತಂಕಪಡಬೇಕಾದ ಸ್ಥಿತಿಯಿದೆ.
ಕಳೆದ ತಿಂಗಳು ಇದೇ ಹೆದ್ದಾರಿ ದಾಟುವ ವೇಳೆ ವಾಹನ ಬಡಿದು ವಿದ್ಯಾರ್ಥಿಯೋರ್ವ ಗಾಯಗೊಂಡಿದ್ದ ಘಟನೆ ಸಹ ನಡೆದಿದ್ದು ಅದೃಷ್ಟವಶಾತ್ ಹೆಚ್ಚಿನ ಅಪಾಯ ಉಂಟಾಗಿರಲಿಲ್ಲ. ಹೀಗಾಗಿ ಶಾಲೆಗೆ ತೆರಳಲು ಮಕ್ಕಳಿಗೆ ಅನುವುಮಾಡಿಕೊಡುವ ದೃಷ್ಟಿಯಿಂದ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಿಸಿಕೊಡುವಂತೆ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
PublicNext
23/09/2022 07:32 pm