ಕಾರವಾರ (ಉತ್ತರಕನ್ನಡ): ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ರಾಜಕೀಯದ ಹಣೆಬರಹ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಯಾವ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆಂಬುದರ ಮೇಲೆ ನಿರ್ಧರಿತವಾಗಿದೆ. ಆದರೆ ಸದ್ಯದ ಮಾಹಿತಿ ಪ್ರಕಾರ ಪಕ್ಷೇತರವಾಗಿ ಕಣಕ್ಕಿಳಿಯಲು ಆನಂದ್ ಸಿದ್ಧತೆ ನಡೆಸಿದ್ದಾರೆನ್ನುವ ಮಾತುಗಳು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರ ಜಿಲ್ಲೆಯಲ್ಲಿಯೇ ಸಾಕಷ್ಟು ಜಿದ್ದಾಜಿದ್ದಿನ ಕ್ಷೇತ್ರವಾಗಿದ್ದು, ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಸ್ಪರ್ಧಿಸುವ ಮೂವರೂ ಅಭ್ಯರ್ಥಿಗಳು ಪ್ರಬಲವಾಗಿರುವ ಹಿನ್ನಲೆಯಲ್ಲಿ ಯಾರ ಮಡಿಲಿಗೆ ವಿಜಯ ಲಕ್ಷ್ಮಿ ಒಲಿಯುತ್ತಾಳೆ ಎನ್ನುವ ಕುತೂಹಲ ಇಡೀ ಜಿಲ್ಲೆಯಲ್ಲಿ ಎದುರಾಗುತ್ತದೆ. ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ, ಒಮ್ಮೆ ಸಂಪುಟ ಸಚಿವರಾಗಿದ್ದ ಆನಂದ್ ಅಸ್ನೋಟಿಕರ್ ಬಿಜೆಪಿಯಿಂದ 2013ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನ ಕಂಡಿದ್ದರು. ನಂತರ 2018ರ ಚುನಾವಣೆಯಲ್ಲಿ ಜೆಡಿಎಸ್ ನಿಂದ ಕಣಕ್ಕೆ ಇಳಿದಿದ್ದರು.
ಕ್ಷೇತ್ರದಲ್ಲಿ ಶಾಸಕಿ ರೂಪಾಲಿ ನಾಯ್ಕಗೆ ಬಹುತೇಕ ಬಿಜೆಪಿ ಟಿಕೇಟ್ ಫೈನಲ್ ಎನ್ನಲಾಗಿದ್ದು, ಇನ್ನು ಸತೀಶ್ ಸೈಲ್ ಸಹ ಕಾಂಗ್ರೆಸ್ ಸಂಘಟನೆಯಲ್ಲಿ ಆಸಕ್ತಿ ವಹಿಸಿರುವುದರಿಂದ ಕಾಂಗ್ರೆಸ್ ನಿಂದ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಆನಂದ್ ಅಸ್ನೋಟಿಕರ್ ಕಳೆದ ಕೆಲ ತಿಂಗಳ ಹಿಂದೆಯೇ ತಾನು ಜೆಡಿಎಸ್ನಿಂದ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿಕೊಂಡಿದ್ದರು. ಇತ್ತ ಬಿಜೆಪಿ ಅಥವಾ ಕಾಂಗ್ರೆಸ್ ಸೇರುವ ಪ್ರಯತ್ನವನ್ನ ಸಹ ಮಾಡಿದ್ದರು. ಆದರೆ ಸದ್ಯ ಕ್ಷೇತ್ರದಲ್ಲಿ ಪಕ್ಷೇತರವಾಗಿಯೇ ಕಣಕ್ಕೆ ಇಳಿದರೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಆನಂದ್ ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.
ಅಕ್ಟೋಬರ್ ನಿಂದ ಕ್ಷೇತ್ರದಲ್ಲಿ ತಿರುಗಾಡುವ ಮೂಲಕ ಬೆಂಬಲಿಗರನ್ನ ಒಂದುಗೂಡಿಸುವ ಪ್ರಯತ್ನಕ್ಕೆ ಆನಂದ್ ಮುಂದಾಗುತ್ತಿದ್ದು, ಈ ಹಿಂದೆ ಸೊಲಿಗೆ ಕಾರಣವಾಗಿದ್ದ ತಪ್ಪುಗಳನ್ನ ಮರುಕಳಿಸದಂತೆ, ಎಲ್ಲರ ಅಭಿಪ್ರಾಯ ಪಡೆದು ಅಖಾಡಕ್ಕೆ ಇಳಿಯುವ ಚಿಂತನೆಯಲ್ಲಿ ಆನಂದ್ ಇದ್ದಾರೆ. ಇದು ಅವರಿಗೆ ಎಷ್ಟರ ಮಟ್ಟಿಗೆ ಯಶಸ್ಸು ತಂದುಕೊಡಲಿದೆ ಎನ್ನುವುದನ್ನ ಕಾದು ನೋಡಬೇಕಾಗಿದೆ.
PublicNext
25/09/2022 09:00 pm