ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಬಹುಬೇಡಿಕೆಯಾಗಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕನಸಿಗೆ ಸರ್ಕಾರ ತಣ್ಣೀರೆರಚಿದೆ. ಕಾರವಾರದ ಕ್ರಿಮ್ಸ್‌ನಿಂದ ಕಳುಹಿಸಲಾಗಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಕುರಿತಾದ ಪ್ರಸ್ತಾವವನ್ನ ಆರ್ಥಿಕ ಇಲಾಖೆ ತಿರಸ್ಕರಿಸುವ ಮೂಲಕ ಉತ್ತರ ಕನ್ನಡಿಗರ ಬೇಡಿಕೆಯನ್ನ ನಿರ್ಲಕ್ಷಿಸಿದ್ದು, ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಹೌದು. ದಶಕಗಳ ಬೇಡಿಕೆಯಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ ಕಳೆದ ಮೂರು ವರ್ಷಗಳಿಂದ ಹೋರಾಟ, ಪ್ರತಿಭಟನೆಗಳು ತೀವ್ರಗೊಂಡಿದ್ದವು. ಇತ್ತ ಆಸ್ಪತ್ರೆ ಬೇಡಿಕೆಯ ಕುರಿತಂತೆ ಅಧಿವೇಶನದಲ್ಲಿ ಇಂದು ಕಾರವಾರ ಶಾಸಕಿ ರೂಪಾಲಿ ನಾಯ್ಕ ಅವರು ಚುಕ್ಕೆ ಗುರುತಿನ ಪ್ರಶ್ನೆಗಳ ಸಂದರ್ಭದಲ್ಲಿ ಪ್ರಶ್ನಿಸಿದ್ದರು. ಆದರೆ ಇದಕ್ಕೆ ಆರೋಗ್ಯ ಸಚಿವ ಡಾ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಕಾರವಾರದ ಕ್ರಿಮ್ಸ್ ನಿರ್ದೇಶಕರಿಂದ ಸಲ್ಲಿಸಲಾದ ಪ್ರಸ್ತಾವವನ್ನ ಆರ್ಥಿಕ ಇಲಾಖೆ ತಿರಸ್ಕರಿಸಿರುವುದಾಗಿ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಕಿಡಿಕಾರಿರುವ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಸರ್ಕಾರ ದಿವಾಳಿಯಾಗಿದೆ. ಆರೋಗ್ಯ ವ್ಯವಸ್ಥೆ ನೀಡುವಷ್ಟು ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲವೆಂದರೆ ಸರ್ಕಾರವಿದ್ದೂ ಏನು ಪ್ರಯೋಜನ? ರಾಜೀನಾಮೆ ಕೊಟ್ಟು ನಡೆಯಿರಿ ಎಂದಿದ್ದಾರೆ.
ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ ರಕ್ತ ಪತ್ರ ಚಳುವಳಿ ನಡೆಸಿದ್ದ ವಾಟಾಳ್ ಪಕ್ಷದ ಜಿಲ್ಲಾಧ್ಯಕ್ಷ ರಾಘು ನಾಯ್ಕ, ಮತಕ್ಕಾಗಿ ಮಾತ್ರ ಇಲ್ಲಿನ ಜನ ಬೇಕಾಗಿದ್ದಾರೆ. ಚುನಾವಣೆ ಬಹಿಷ್ಕಾರ ಹಾಕುತ್ತೇವೆ. ಹಾಸ್ಪಿಟಲ್‌ನಲ್ಲಿ ಪರ್ಸಂಟೇಜ್ ಸಿಗಲ್ಲ ಎಂದು ಹೀಗೆ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸುತ್ತಿದ್ದಾರೆ.
ಕಾರವಾರದಲ್ಲೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸೌಲಭ್ಯ ಒದಗಿಸಬೇಕೆಂಬ ಪ್ರಸ್ತಾವವನ್ನ ತಿರಸ್ಕರಿಸಿರುವುದು ಬೇಸರದ ಸಂಗತಿ. ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಇನ್ನಷ್ಟು ಒತ್ತಡ ಹೇರಬೇಕಿದೆ ಎನ್ನುವುದು ಸಾಮಾಜಿಕ ಕಾರ್ಯಕರ್ತ ಟಿ.ಬಿ.ಹರಿಕಾಂತ್ ಅವರ ಅಭಿಪ್ರಾಯವಾಗಿದೆ.
PublicNext
15/09/2022 08:20 pm