ಕಾರವಾರ : ಕರಾವಳಿ ಜಿಲ್ಲೆ ಉತ್ತರಕನ್ನಡದಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಸಂಪರ್ಕ ಸಾಧಿಸುತ್ತಿರುವ ನಿಷೇಧಿತ ಸ್ಯಾಟಲೈಟ್ ಕರೆಗಳ ಹಿನ್ನೆಲೆ ನಿಗೂಢವಾಗಿ ಉಳಿದುಕೊಂಡಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.
ಕೈಗಾ ಅಣುವಿದ್ಯುತ್ ಸ್ಥಾವರ, ಸೀಬರ್ಡ್ ನೌಕಾನೆಲೆ, ಐದು ಅಣೆಕಟ್ಟುಗಳಂತೆ ಹಲವು ಸೂಕ್ಷ್ಮತೆಗಳನ್ನ ಹೊಂದಿರುವ ಉತ್ತರ ಕನ್ನಡದಲ್ಲಿ ಕಳೆದ ಮೂರು ವರ್ಷಗಳಿಂದ ಈ ಸ್ಯಾಟಲೈಟ್ ಫೋನ್ ಗುಮ್ಮ ಕಾಡಲಾರಂಭಿಸಿದೆ. ಗುಪ್ತಚರ ಇಲಾಖೆ ಪ್ರತಿ ಬಾರಿಯೂ ಸ್ಯಾಟಲೈಟ್ ಕರೆ ಸಂಪರ್ಕ ಸಾಧಿಸಿದಾಗ ಪೊಲೀಸ್ ಇಲಾಖೆಗೆ ಮಾಹಿತಿ ನೀಡುತ್ತಿದ್ದರೂ, ಪೊಲೀಸರಿಂದ ಈವರೆಗೆ ಈ ಕರೆಗಳ ಜಾಡು ಹಿಡಿಯಲಾಗಿಲ್ಲ. ಇದು ಜಿಲ್ಲೆಯ ಜನತೆಯಲ್ಲಿ ದೊಡ್ಡ ಪ್ರಶ್ನೆಯನ್ನಾಗಿ ಕಾಡುತ್ತಿದೆ.
ಜಿಲ್ಲೆಯ ಕಾರವಾರ, ಕೈಗಾ, ಯಲ್ಲಾಪುರ, ಗೋಕರ್ಣ ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ಈ ಸ್ಯಾಟಲೈಟ್ ಕರೆಗಳು ಸಂಪರ್ಕ ಸಾಧಿಸುತ್ತಿವೆ. ಆದರೆ ಯಾರ ಯಾರ ನಡುವೆ ಸಂಪರ್ಕ ಏರ್ಪಡುತ್ತಿದೆ, ಆಗಂತುಕರು ಯಾರಾದರೂ ಈ ರೀತಿಯ ಸ್ಯಾಟಲೈಟ್ ಕರೆಗಳನ್ನ ಬಳಸುತ್ತಿದ್ದಾರಾ ಎನ್ನುವುದನ್ನ ಪೊಲೀಸರು ಕೂಂಬಿಂಗ್ ನಡೆಸಿದ್ದರೂ ಯಶಸ್ವಿಯಾಗಿಲ್ಲ. ಇನ್ನು ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳನ್ನೇ ಕೇಳಿದ್ರೆ, ಸಮುದ್ರಗಳಲ್ಲಿ ಸಂಚರಿಸುವ ಕೆಲ ವಿದೇಶಿ ಹಡಗುಗಳಲ್ಲಿ ಸ್ಯಾಟಲೈಟ್ ಫೋನ್ ಗಳನ್ನ ಬಳಕೆ ಮಾಡುತ್ತಾರೆ. ಒಮ್ಮೊಮ್ಮೆ ಆ ಸಿಗ್ನಲ್ ಕೂಡ ಭೂಪ್ರದೇಶದಲ್ಲಿ ತೋರಿಸುವ ಸಾಧ್ಯತೆ ಇದೆ ಎನ್ನುತ್ತಾರೆ.
ಅದೇನೆ ಇರಲಿ, ಜಿಲ್ಲೆಯಲ್ಲಿ ಆಗಾಗ ಸ್ಯಾಟಲೈಟ್ ಫೋನ್ ರಿಂಗಣಿಸುತ್ತಿರೋದು ಉತ್ತರಕನ್ನಡಿಗರಲ್ಲಿ ಆತಂಕಕ್ಕೆ ಕಾರಣವಾಗಿರೋದಂತೂ ಸತ್ಯ. ಶೀಘ್ರವೇ ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆ ಕೈಗೊಂಡು, ನಿಜಕ್ಕೂ ನಡೀತಿರೋದಾದ್ರು ಏನು ಅನ್ನೋದನ್ನ ಸಾರ್ವಜನಿಕರ ಗಮನಕ್ಕೆ ತಂದು, ಜನರ ಆತಂಕ ದೂರ ಮಾಡಬೇಕಿದೆ....
Kshetra Samachara
19/09/2022 05:20 pm