ಕಾರವಾರ (ಉತ್ತರಕನ್ನಡ): ಕರಾವಳಿ ಭಾಗದಲ್ಲಿ ಸಿ.ಆರ್.ಜೆಡ್ ವಲಯದಲ್ಲಿ ಮರಳನ್ನ ತೆಗೆದು ಮಾರಾಟ ಮಾಡುವಂತಿಲ್ಲ ಎನ್ನುವ ರಾಷ್ಟ್ರೀಯ ಹಸಿರು ಪೀಠದ ಆದೇಶದ ಬಳಿಕ ಉತ್ತರಕನ್ನಡದಲ್ಲಿ ಮರಳುಗಾರಿಕೆ ಬಂದ್ ಆಗಿದೆ. ಆದರೆ ಇದರ ಬೆನ್ನಲ್ಲೇ ಅನಧಿಕೃತವಾಗಿ ಮರಳು ತೆಗೆದು ಗೋವಾಕ್ಕೆ ಸಾಗಿಸಿ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಇದೀಗ ಕೇಳಿ ಬಂದಿದೆ.
ರಾಷ್ಟ್ರಿಯ ಹಸಿರು ಪೀಠದ ಆದೇಶದಂತೆ ಕಳೆದ ನಾಲ್ಕೈದು ತಿಂಗಳಿನಿಂದ ಜಿಲ್ಲೆಯಲ್ಲಿ ಮರಳುಗಾರಿಕೆ ಬಂದ್ ಆಗಿದ್ದು, ಜಿಲ್ಲೆಯಲ್ಲಿ ಮರಳಿನ ಅಭಾವ ಸಹ ಎದುರಾಗಿದೆ. ಇದರ ನಡುವೆ ಸದ್ದಿಲ್ಲದೇ ಅಕ್ರಮವಾಗಿ ಮರಳನ್ನ ಸಾಗಾಟ ಮಾಡುವ ದಂಧೆ ಸಹ ಜೋರಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅದರಲ್ಲೂ ಕಾಳಿ ನದಿಯಲ್ಲಿ ಮರಳನ್ನ ತೆಗೆದು ರಾತ್ರೋರಾತ್ರಿ ಕದ್ದು ಗೋವಾಕ್ಕೆ ಸಾಗಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಇನ್ನು ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನ ಕೇಳಿದರೆ, ಮರಳನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ದೂರು ಬಂದಿದೆ. ಹೀಗಾಗಿ ಇವುಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ ಎನ್ನುತ್ತಾರೆ.
ಒಟ್ಟಿನಲ್ಲಿ ಸ್ಥಳೀಯರಿಗೆ ಸಿಗದ ಮರಳನ್ನ ಗೋವಾ ರಾಜ್ಯಕ್ಕೆ ಹಣಕ್ಕಾಗಿ ಸಾಗಾಟ ಮಾಡಲಾಗುತ್ತಿದೆ ಎನ್ನುವುದು ನಿಜಕ್ಕೂ ದುರಂತ. ಅಧಿಕಾರಿಗಳು ಈಗಲಾದರೂ ಕೊಂಚ ಬಿಗಿ ಕ್ರಮಗಳನ್ನೇ ಕೈಗೊಂಡು ಈ ದಂಧೆಗೆ ಕಡಿವಾಣ ಹಾಕಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
PublicNext
23/09/2022 05:59 pm