ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಗೋವಾ ಸಿಎಂ ಝೀರೋ ಟ್ರಾಫಿಕ್‌ಗೆ ಕಾರವಾರಿಗನ ಬಲಿ.!

ಕಾರವಾರ (ಉತ್ತರಕನ್ನಡ): ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ತೆರಳಲು ಝೀರೋ ಟ್ರಾಫಿಕ್ ಮಾಡಿದ್ದರಿಂದ ಅಪಘಾತವೊಂದು ನಡೆದು ಕಾರವಾರದ ಯುವಕನೋರ್ವ ಮೃತಪಟ್ಟಿದ್ದಾನೆ. ಅಲ್ಲದೇ ಅಪಘಾತಕ್ಕೆ ಕಾರಣರಾದವರನ್ನು ಬಂಧಿಸಿ ತಮ್ಮೆದುರು ಹಾಜರುಪಡಿಸಬೇಕೆಂದು ಒತ್ತಾಯಿಸಿ ಕಾರವಾರದ ಚಿತ್ತಾಕುಲಾ ಪೊಲೀಸ್ ಠಾಣೆಯೆದುರು ಹೈಡ್ರಾಮಾವೇ ನಡೆದು ಹೋಗಿದೆ.

ಮೂರು ದಿನಗಳ ಹಿಂದೆ ರಸ್ತೆ ಮಾರ್ಗದಲ್ಲಿ ಧರ್ಮಸ್ಥಳಕ್ಕೆ ತೆರಳಿದ್ದ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್, ಶನಿವಾರ ರಾತ್ರಿ ಗೋವಾಕ್ಕೆ ಕಾರವಾರದ ಮೂಲಕ ರಸ್ತೆ ಮಾರ್ಗದಲ್ಲಿ ವಾಪಸ್ ಆಗಿದ್ದಾರೆ. ಅವರಿಗಾಗಿ ಗೋವಾ ಗಡಿಯಿಂದ ಕಾರವಾರದವರೆಗೆ ಝೀರೋ ಟ್ರಾಫಿಕ್ ನೀಡಲಾಗಿದ್ದು, ಸಾರ್ವಜನಿಕ ವಾಹನಗಳನ್ನ ಒನ್ ವೇನಲ್ಲಿ ಬಿಡಲಾಗಿದೆ. ಹೀಗೆ ಒನ್ ವೇನಲ್ಲಿ ಬರುತ್ತಿದ್ದ ಲಾರಿಯವನೊಬ್ಬನಿಗೆ ಅಡ್ಡ ಹಾಕಿ, ಒನ್ ವೇನಲ್ಲಿ ಹೇಗೆ ಬಂದಿದ್ದೀಯಾ ಎಂದು ಯುವಕರಿಬ್ಬರು ಕಾರವಾರ ತಾಲೂಕಿನ ಮಾಜಾಳಿಯ ಘೋಟ್ನೇಬಾಗ್ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಪ್ರಶ್ನಿಸುತ್ತಾ ನಿಂತಿದ್ದಾಗ ಕಾರೊಂದು ಅತಿವೇಗದಲ್ಲಿ ಬಂದು ಯುವಕರಿಗೆ ಡಿಕ್ಕಿಯಾಗಿದೆ. ಪರಿಣಾಮ ಕಾರವಾರ ತಾಲೂಕಿನ ಕೊಂಕಣವಾಡದ ಸೂರಜ ರಾಣೆ ಎನ್ನುವಾತ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ.

ಅಪಘಾತದ ಸಂದರ್ಭ ಡಿಕ್ಕಿ ಹೊಡೆದ ಕಾರಿನಲ್ಲಿದ್ದ ಚಾಲಕ ಸೇರಿ ಮೂವರು ನಾಪತ್ತೆಯಾಗಿದ್ದರು. ಹೀಗಾಗಿ ಭಾನುವಾರ ಬೆಳಿಗ್ಗೆ ಪೊಲೀಸ್ ಠಾಣೆಗೆ ಬಂದಿದ್ದ ಒಂದಷ್ಟು ಸ್ಥಳೀಯ ಯುವಕರು, ಆರೋಪಿತರನ್ನು ಬಂಧಿಸಲು ಒತ್ತಾಯಿಸಿದ್ದರು. ಮಧ್ಯಾಹ್ನದ ವೇಳೆ ಆರೋಪಿತ ಮೂವರನ್ನೂ ಪೊಲೀಸರು ಹುಡುಕಿ ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿಟ್ಟಿದ್ದರು. ಆದರೆ ಸಂಜೆಯ ವೇಳೆಗೆ ಮಾಜಿ ಶಾಸಕ ಸತೀಶ್ ಸೈಲ್ ಹಾಗೂ ನೂರಾರು ಮಂದಿ ಚಿತ್ತಾಕುಲಾ ಪೊಲೀಸ್ ಠಾಣೆಯೆದುರು ಜಮಾಯಿಸಿ, ಆರೋಪಿತರನ್ನು ತಮಗೆ ತೋರಿಸುವಂತೆ ಒತ್ತಾಯಿಸಿದ್ದಾರೆ. ಕೆಲ ಗಂಟೆಗಳ ಕಾಲ ನಡೆದ ಈ ಪ್ರಹಸನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭದ್ರಿನಾಥ್ ಮಧ್ಯಪ್ರವೇಶಿಸಿ ಕೊನೆಗೆ ವಿಡಿಯೋ ಕಾಲ್ ನಲ್ಲಿ ಆರೋಪಿತರನ್ನು ತೋರಿಸಿದ ಬಳಿಕ ಠಾಣೆಯೆದುರು ನೆರೆದಿದ್ದವರು ಹಿಂತಿರುಗಿದ್ದಾರೆ.

Edited By : Shivu K
PublicNext

PublicNext

10/10/2022 10:13 am

Cinque Terre

43.74 K

Cinque Terre

0