ಉಡುಪಿ: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂಲನಿವಾಸಿಗಳಾದ ಕೊರಗರು ಮೂಲತ: ಸಂಕೋಚ ಸ್ವಭಾವದವರು. ತಮ್ಮ ಜನಾಂಗದವರ ಹೊರತು ಇತರರೊಂದಿಗೆ ಹೆಚ್ಚು ಬೆರೆಯುವುದಿಲ್ಲ. ಇವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ಅವರಲ್ಲಿ ಆತ್ಮ ವಿಶ್ವಾಸ ಮೂಡಿಸಲು ಇದೇ ಪ್ರಪ್ರಥಮ ಬಾರಿಗೆ ಜಿಲ್ಲಾಡಳಿತ, ಜಿಪಂ ಉಡುಪಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ವತಿಯಿಂದ ಫೆ. 5ರಿಂದ 7ರ ವರೆಗೆ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಅಂತರ್ ಜಿಲ್ಲಾಮಟ್ಟದ ಕೊರಗರ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಉತ್ಸವ ಉಡುಪಿ ಜಿಲ್ಲಾ ಕ್ರೀಡಾಂಗಣ ಮತ್ತು ಬೀಡಿನಗುಡ್ಡೆ ಮೈದಾನದಲ್ಲಿ ನಡೆಯಲಿದೆ.
ಕೊರಗ ಸಮುದಾಯದವರಿಗೆ ಮಾತ್ರ ಈ ಕ್ರೀಡೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ಮೀಸಲಾಗಿದ್ದು, ಕ್ರೀಡಾ ಸ್ಪರ್ಧೆಗಳು 14 ವರ್ಷದೊಳಗಿನ ಬಾಲಕ /ಬಾಲಕಿಯರು, 16 ವರ್ಷದೊಳಗಿನ ಬಾಲಕ /ಬಾಲಕಿಯರು, 18 ವರ್ಷದೊಳಗಿನ ತರುಣ /ತರುಣಿಯರು, 20 ವರ್ಷದೊಳಗಿನ ಯುವಕ /ಯುವತಿಯರು, 20 ವರ್ಷ ಮೇಲ್ಪಟ್ಟ ಯುವಕ /ಯುವತಿಯರ ವಿಭಾಗದಲ್ಲಿ ನಡೆಯಲಿದ್ದು, ವಿವಿಧ ದೂರದ ಓಟದ ಸ್ಪರ್ಧೆ, ಗುಂಡು ಎಸೆತ, ಉದ್ದ ಜಿಗಿತ, ಹಗ್ಗ ಜಗ್ಗಾಟ ಸ್ಪರ್ಧೆಗಳಿದ್ದು, ಎಲ್ಲ ವಿಭಾಗದ ವಿಜೇತ ಕ್ರೀಡಾಪಟುಗಳಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪದಕ ನೀಡಲಾಗುವುದು.
ಪುರುಷರ ವಿಭಾಗದಲ್ಲಿ ವಾಲಿಬಾಲ್, ಕಬಡ್ಡಿ, ಕ್ರಿಕೆಟ್, ಮತ್ತು ಮಹಿಳೆಯರ ವಿಭಾಗದಲ್ಲಿ ಥ್ರೋಬಾಲ್, ಕೇರಂ, ಚೆಸ್ ಸೇರಿದಂತೆ ವಿವಿಧ ಸ್ಪರ್ಧೆಗಳು ಮತ್ತು ಬಿರು (ಚಿಟ್ ಬಿಲ್/ಗುರಿ ಇಡುವ ಸ್ಪರ್ಧೆ) ಸಹ ಆಯೋಜಿಸಲಾಗಿದ್ದು, ಸಾಂಸ್ಕೃತಿಕ ಸ್ಪರ್ಧೆಯೂ ನಡೆಯಲಿದೆ.
Kshetra Samachara
03/02/2021 11:52 am