ಕಾರ್ಕಳ: ರಾಜ್ಯದ ಗ್ರಾಮ ಪಂಚಾಯತ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಸಿ ಹಾಗೂ ಡಿ ದರ್ಜೆಯ ನೌಕರರ ಸ್ಥಾನಮಾನದ ಜತೆಗೆ ವೇತನ ಹೆಚ್ಚಳ ಸೇರಿ ಇತರೇ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ನೌಕರರು ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದು ಈ ನಿಟ್ಟಿನಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆಯು ಶನಿವಾರ ಕಾರ್ಕಳದ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ತಾಲೂಕು ಸಮಿತಿಯ ಅಧ್ಯಕ್ಷೆ ನಳಿನಿ ರೆಂಜಾಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ್ ಕುಲಾಲ್ ಮಾತನಾಡಿ, ಗ್ರಾಮ ಪಂಚಾಯತ್‌ನ ಎಲ್ಲಾ ಸ್ತರದ ನೌಕರರ ಸಮಸ್ಯೆಗಳ ಬಗ್ಗೆ ಸವಿಸ್ತಾರದ ಮಾಹಿತಿ ನೀಡಿದರು. ರಾಜ್ಯದ ಗ್ರಾಮ ಪಂಚಾಯತ್ ನೌಕರರಿಗೆ ಸ್ಥಳೀಯಾಡಳಿತ ಸಂಸ್ಥೆಗಳಾದ ಪುರಸಭೆ, ನಗರಸಭೆ ಮತ್ತು ಪಟ್ಟಣ ಪಂಚಾಯತಿಗಳAತೆ ಸೇವಾ ನಿಯಮಾವಳಿ ರಚಿಸಿ ಅಲ್ಲಿನ ನೌಕರರಂತೆ ಎಲ್ಲಾ ರೀತಿಯ ಸ್ಥಾನಮಾನ ನೀಡಬೇಕೆನ್ನುವ ಹೋರಾಟ ನಡೆಸಬೇಕಿದೆ ಎಂದರು.
ಸಭೆಯಲ್ಲಿ ಗ್ರಾಮ ಪಂಚಾಯತ್ ನೌಕರರ ಬೇಡಿಕೆ ಈಡೇರಿಕೆಗೆ ಕಾರ್ಕಳ ತಾಲೂಕು ಪಂಚಾಯಿತಿ ನೌಕರರ ಹೋರಾಟ ಸಮಿತಿಯನ್ನು ರಚಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ರಾಜ್ಯ ಸಮಿತಿಯ ರಾಜ್ಯಧ್ಯಕ್ಷ ದೇವಿಪ್ರಸಾದ್ ಬೊಳ್ಮ, ಸಮಿತಿಯ ಗೌರವಾಧ್ಯಕ್ಷ ಸೈಪುಲ್ ನಲ್ಲೂರು, ಉಡುಪಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಹೇಮಚಂದ್ರ ನಂದಳಿಕೆ, ಕಾರ್ಕಳ ತಾಲೂಕು ಸಮಿತಿಯ ಉಪಾಧ್ಯಕ್ಷ ರಾಜೇಶ್ ಮಿಯ್ಯಾರು, ಕಾರ್ಯದರ್ಶಿ ಬಸವರಾಜ್ ನಿಟ್ಟೆ ಹಾಗೂ ತಾಲೂಕು ಸಮಿತಿಯ ಸದಸ್ಯರುಗಳು ಹಾಗೂ ಎಲ್ಲಾ ನೌಕರರು ಹಾಜರಿದ್ದರು.
Kshetra Samachara
10/10/2022 07:18 pm